ಸಮಿತಿಯೇ ರದ್ದಾದ ಮೇಲೆ ಪರಿಷ್ಕೃತ ಪಠ್ಯ ಏಕೆ ಬೇಕು?: ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

BJP Congress
Published on

ಬೆಂಗಳೂರು: ಪರಿಷ್ಕೃತ ಪಠ್ಯವನ್ನು ಮೊದಲು ರದ್ದು ಮಾಡಿ, ಒಂದು ಕೋಟಿ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮತ್ತು ಶಾಸಕ ಪ್ರಿಯಾಂಕ ಖರ್ಗೆ, ಬಿಜೆಪಿ ಸರ್ಕಾರದ ಎಡಬಿಡಂಗಿ ಧೋರಣೆಗಳ ಬಗ್ಗೆ ವಾಗ್ದಾಳಿ ನಡೆಸಿದರು. ಪಠ್ಯ ಪರಿಷ್ಕರಣಾ ಸಮಿತಿ ವಿಸರ್ಜನೆ ಮಾಡಿರುವುದು ಸ್ವಾಗತಾರ್ಹ. ಆದರೆ, ಅವರೇ ಪರಿಷ್ಕೃರಣೆ ಮಾಡಿರುವ ಪಠ್ಯ ಉಳಿಸಿಕೊಂಡಿರುವುದು ಯಾಕೆ? ಎಂದು ಪ್ರಶ್ನಿಸಿದರು. ಪಠ್ಯ ಪುಸ್ತಕ ಪರಿಷ್ಕರಣೆಗೆ ಸಾಹಿತಿಗಳು, ಪ್ರಗತಿಪರರು, ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪರಿಷ್ಕರಣೆಯನ್ನು ನಾವು ಒಪು್ಪವುದಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ಅಂದರೆ, ಅಂಗಡಿಯಲ್ಲಿ ಕಾಫಿ, ಟೀ ಕೇಳಿದಂತಲ್ಲ. ಮೇಲಾಗಿ ಎರಡು ತಿಂಗಳಲ್ಲಿ ಪರಿಷ್ಕರಣೆ ಸಾಧ್ಯವೇ ಇಲ್ಲ ಎಂದರು. ಕಿಮ್ಮನೆ ರತ್ನಾಕರ್ ಮಾತನಾಡಿ, ಜಾತಿ ವ್ಯವಸ್ಥೆ ನಿರ್ಮಾಣ ಮಾಡಿದ್ದು ಮನುಸ್ಮೃತಿ. ಬಸವಣ್ಣ, ಪೆರಿಯಾರ್, ನಾರಾಯಣಗುರು ಸಮಾಜ ಸುಧಾರಣೆಗಾಗಿ ಹೋರಾಟ ಮಾಡಿದವರು. ಅವರಿಗೂ ಅವಮಾನ ಮಾಡಿರುವುದು ಖಂಡನೀಯ. ಪಠ್ಯವನ್ನು ಮೊದಲು ವಾಪಸ್ ಪಡೆದು ಹೊಸ ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ನಿಮ್ಮ ಪಾತ್ರವನ್ನು ಹೇಳಿ: ಪ್ರಿಯಾಂಕ ಖರ್ಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾಕೆ ಭಾಗವಹಿಸಲಿಲ್ಲ? ಗಾಂಧೀಜಿ ಕೊಂದಿದ್ದು ಯಾಕೆ? ನಿಮ್ಮ ಸಂಘದ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಲಿಲ್ಲ? ಸಂವಿಧಾನವನ್ನ ಸುಟ್ಟಿದ್ದು ಯಾಕೆ? ರಾಮಲೀಲಾದಲ್ಲಿ ಯಾಕೆ ನಿರಂತರ ಪ್ರತಿಭಟನೆ ಮಾಡಿದ್ದು? ಎನ್ನುವ ವಿಷಯವನ್ನು ಆರ್​ಎಸ್​ಎಸ್ ಕೈಪಿಡಿಯಲ್ಲಿ ಧೈರ್ಯವಾಗಿ ಹೇಳಿ ಎಂದು ಸವಾಲು ಹಾಕಿದರು.

ಕರ್ನಾಟಕದ ಅಸ್ಮಿತೆಗೆ ವಿರುದ್ಧವಾಗಿರುವ ಬಿಜೆಪಿ: ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಬಿಜೆಪಿ ಸರ್ಕಾರ ಕರ್ನಾಟಕದ ಅಸ್ಮಿತೆಗೆ ವಿರುದ್ಧವಾದ ಪಠ್ಯವನ್ನು ಮಕ್ಕಳಿಗೆ ಕಲಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಠ್ಯ ಪರಿಷ್ಕರಣೆ ಕುರಿತು ಟ್ವಿಟ್ ಮಾಡಿರುವ ಅವರು, ಈ ಸರ್ಕಾರ ಅಂಬೇಡ್ಕರ್, ಬುದ್ಧ-ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ವಿರುದ್ಧವಾದ ಸಂದೇಶಗಳನ್ನು ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಹೊರಟಿದೆ ಎಂದು ಟೀಕಿಸಿದ್ದಾರೆ.

ಸಮಾಜ ಸುಧಾರಕ ಬಸವಣ್ಣ ಚರಿತ್ರೆಗೆ ಸಂಬಂಧಿಸಿದ ವಿಚಾರಗಳಲ್ಲಿ ಉಂಟಾಗಿರುವ ಗೊಂದಲವನ್ನು ಕೂಡಲೇ ನಿವಾರಿಸಬೇಕು. ಯಾವುದೇ ಇತಿಹಾಸ ತಿರುಚಬಾರದು. ಪಠ್ಯಗಳು ಜ್ಞಾನಾರ್ಜನೆಗೆ ಪೂರಕವಾಗಿರಬೇಕು. ಗೊಂದಲ ಸೃಷ್ಟಿಸಬಾರದು. | ಡಾ.ಶಿವಮೂರ್ತಿ ಮುರುಘಾ ಶರಣರು ಸರ್ಕಾರ ಈಗ ವಿಸರ್ಜನೆ ಮಾಡಬೇಕಾಗಿರುವುದು ಪರಿಷ್ಕೃತ ಪಠ್ಯವನ್ನೇ ಹೊರತು ಈಗಾಗಲೆ ಅವಧಿ ಮುಗಿದಿರುವ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯನ್ನಲ್ಲ. ಪೂರ್ವಗ್ರಹಪೀಡಿತ ಅಧ್ಯಕ್ಷನನ್ನು ಕಿತ್ತು ಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಮಾತುಕತೆಗೆ ಕರೆಯಲು ಬರಗೂರು ಒತ್ತಾಯ

ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಿದ್ದರೂ ಪಠ್ಯಪುಸ್ತಕದ ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದೆಡೆ ಮರುಪರಿಷ್ಕರಣೆ ವಿರೋಧಿಸುತ್ತಿರುವವರನ್ನು ಸರ್ಕಾರ ಮಾತುಕತೆಗೆ ಆಹ್ವಾನಿಸಬೇಕೆಂದು ಹಿಂದಿನ ಸಮಿತಿ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಭರವಸೆಯನ್ನು ಸ್ವಾಗತಿಸುತ್ತೇನೆ. ಹಾಗೆಯೇ ಆ ಭರವಸೆಯ ಅನುಷ್ಠಾನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ತಿಳಿಸಿದ್ದಾರೆ. ಇನ್ನು ಪಠ್ಯ ಪುಸ್ತಕದಲ್ಲಿ ಹೆಡ್ಗೇವಾರ್ ಅವರ ಪಾಠವನ್ನು ಮುಂದುವರಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆಗೆ ಸಂಘಟನೆಗಳಲ್ಲೇ ಗೊಂದಲ

ನಾಡಗೀತೆಯನ್ನು ತಿರುಚಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿದ ಆರೋಪದ ಸಂಬಂಧ ಪ್ರತಿಭಟನೆ ಮಾಡುವ ಸಂಘಟನೆಗಳಲ್ಲಿ ಗೊಂದಲ ಶುರುವಾಗಿದೆ. ರಾಜ್ಯ ಒಕ್ಕಲಿಗ ಸಂಘದ ಕೆಲ ಮುಖಂಡರು ಪ್ರತಿಭಟನೆ ಮಾಡದಿರಲು ನಿರ್ಧರಿಸಿದರೆ, ವಿಶ್ವ ಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಹೋರಾಟ ಮಾಡಲು ಮುಂದಾಗಿದೆ. ನಾಡಗೀತೆಯನ್ನು ತಿರುಚಿ ರಾಷ್ಟ್ರಕವಿ ಕುವೆಂಪುಗೆ ಅಪಮಾನವಾಗುವಂತೆ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ ಮೇಲೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಸಮಿತಿ ಪ್ರತಿಭಟನೆ ಸಿದ್ಧತೆಯಲ್ಲಿ ನಿರತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net