ಬಿಜೆಪಿ ಗೆದ್ದರೆ ಗ್ಯಾರಂಟಿಗೆ ಆಪತ್ತು

Bhandaari
ಹೊಳೆಹೊನ್ನೂರು ಬ್ಲಾಕ್ ಕಾಂಗೆಸ್‌ನಿಂದ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿದರು. ಸಿ.ಹನುಮಂತು, ಎನ್.ರವಿಕುಮಾರ್, ಎನ್.ರಮೇಶ್, ಶಿವಕುಮಾರ್, ರೇಖಾ ಉಮೇಶ್, ಲೋಕೇಶ್ ಇತರರಿದ್ದರು.
Published on

ಹೊಳೆಹೊನ್ನೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಿದರೆ ಕುತಂತ್ರ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದು ಖಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.

ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಭಗೀರಥ ಸಮುದಾಯ ಭವನದಲ್ಲಿ ಭಾನುವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಹಾಗೂ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಅಪರೇಷನ್ ಕಮಲದಿಂದ ಸರ್ಕಾರ ಬಿದ್ದರೆ ಜನರಿಗೆ ನಾವು ನೀಡುತ್ತಿರುವ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ. ಅದೇ ಹಣವನ್ನು ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ಹಂಚುತ್ತದೆ. ಆದರಿಂದ ಮತದಾರರು ಕಾಂಗ್ರೆಸ್ ಬೆಂಬಲಿಸುವುದನ್ನು ಮರೆಯಬಾರದು. ಪಕ್ಷ ಸಂಘಟನೆಯಲ್ಲಿ ಅಧಿಕಾರಕ್ಕಿಂತ ಜನರ ಪ್ರೀತಿ, ವಿಶ್ವಾಸ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಜನರ ಜತೆಗಿದ್ದು ಜನರ ಭಾವನೆಗೆ ಸ್ಪಂದಿಸಬೇಕು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿದ್ದಿರುವ ಮತಗಳ ಲೆಕ್ಕಾಚಾರದಲ್ಲಿ ಈಗಾಗಲೇ 18 ಲೋಕಸಭೆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದೇವೆ. ಒಂದು ವೇಳೆ ಚುನಾವಣೆಯಲ್ಲಿ ಸೋತರೆ, ಅದು ಪಕ್ಷದ ಸೋಲಲ್ಲ. ಕಾರ್ಯಕರ್ತರ ಸೋಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾಂಗೆಸ್ ಪಕ್ಷ ವಿಧಾನಸಭೆ ಚುನಾವಣೆ ಸಂದರ್ಭ 5 ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. 1.76 ಲಕ್ಷ ಕುಟುಂಬ ಹಾಗೂ ಸುಮಾರು 5 ಕೋಟಿ ಜನ ಗ್ಯಾರಂಟಿ ಫಲಾನುಭವಿಗಳಿದ್ದಾರೆ. ಕೇವಲ ಈ ಗ್ಯಾರಂಟಿ ವಿಷಯಗಳನ್ನು ಮತದಾರರಿಗೆ ತಿಳಿಸುವ ಜತೆ ಮನದಟ್ಟು ಮಾಡಿಕೊಡಬೇಕು. ಜನರು ಸ್ಥಳೀಯ ನಾಯಕರ ನೈತಿಕತೆ ನೋಡುತ್ತಾರೆ. ಹೀಗಿದ್ದಾಗ ಮಾತ್ರ ಕಾಂಗ್ರೆಸ್ ಅನ್ನು ನಂಬಿ ಮತ ಹಾಕುತ್ತಾರೆ. ಅದರ ಪರಿಣಾಮವಾಗಿ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ ಗಳಿಸಲು ಸಾಧ್ಯವಾಯಿತು ಎಂದರು.
ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ ಮಾತನಾಡಿ, ಎಲ್ಲೆಡೆ ಕಾಂಗ್ರೆಸ್ ಪರವಾದ ಜನ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೆ ಜನರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಜಿಪಂ ಮಾಜಿ ಉಪಾಧ್ಯಕ್ಷೆ ರೇಖಾ ಉಮೇಶ್, ತಾಪಂ ಮಾಜಿ ಸದಸ್ಯೆ ತುಂಗಮ್ಮ ಜಯಪ್ಪ, ಭೋವಿ ನಿಗಮದ ಅಧ್ಯಕ್ಷ ಎನ್.ರವಿಕುಮಾರ್, ಎನ್.ರಮೇಶ್, ಶಿವಕುಮಾರ್, ತಿಮ್ಲಾಪುರದ ಲೋಕೇಶ್, ಆರ್.ಉಮೇಶ್, ನೇತ್ರಾವತಿ, ದೇವಿಕುಮಾರ್, ಮೋಹನ್, ಎಚ್.ಆರ್.ತಿಮ್ಮಪ್ಪ, ಎಚ್.ಎನ್ ನಾಗರಾಜ್, ಧೀರರಾಜ್ ಹೊನ್ನವಿಲೆ, ಶ್ರೀಧರ್, ಡಿ.ಬಿ.ಹಳ್ಳಿ ಬಸವರಾಜ್, ಎಂ.ಜಿ ಗುರುಮೂರ್ತಿ, ಲಕ್ಷ್ಮೀ, ಕಿರಣ್‌ಕುಮಾರ್, ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net