ಬಿಜೆಪಿ ನಾಯಕರಿಗೆ ಬದ್ಧತೆ ಇದ್ರೆ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹಾಕಲಿ: DK ಶಿವಕುಮಾರ್ ಸವಾಲು

untitled-design-18-68f8d917924d0
Published on

ರಾಯಚೂರು: ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿಸಿಎಂ DK ಶಿವಕುಮಾರ್ ಸವಾಲೆಸೆದರು.

ರಾಯಚೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಕಾರ್ಯಕರ್ತರ ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದರು. ಬಿಜೆಪಿ ನಾಯಕರೇ, ನೀವು ನಿಗದಿ ಮಾಡುವ ಸಮಯಕ್ಕೆ ನಾನು ಬರುತ್ತೇನೆ. ನಾನು ಈಗಾಗಲೇ ಸುಮಾರು 10 ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಿಗಳ ಮುಂದೆ ಗೋಗರೆದಿದ್ದೇನೆ. ಆದರೂ ಅವರು ಸಹಾಯ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ 5300 ಕೋಟಿ ಇದುವರೆಗೂ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಕೆಲಸ ಮಾಡುವವರನ್ನು ಪಕ್ಷ ಗುರುತಿಸುತ್ತದೆ

"ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನಿಗಿಂತ ರಾಮನ ಭಂಟ ಹನುಮಂತನ ದೇವಾಲಯ ಎಲ್ಲಾ ಕಡೆ ಇವೆ. ಆಂಜನೇಯ ಸಮಾಜ ಸೇವಕ, ತ್ಯಾಗಿ. ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೋ ಸಮಾಜ ಅವರನ್ನು ಗುರುತಿಸುತ್ತದೆ. ಇದಕ್ಕೆ ಪಂಚಮುಖಿ ಆಂಜನೇಯನೇ ಸಾಕ್ಷಿ. ಹೀಗಾಗಿ ಜನರ ಮಧ್ಯೆ ನಿಷ್ಪಕ್ಷಪಾತವಾಗಿ, ಸೇವಾ ಮನೋಭಾವದಲ್ಲಿ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತುಸುತ್ತದೆ" ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

"ವ್ಯಕ್ತಿಗಿಂತ ಪಕ್ಷ ಮುಖ್ಯ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಬೇಕು. ನಾನು ಎಂದಿಗೂ ಗುಂಪು ರಾಜಕಾರಣ ಮಾಡಿಲ್ಲ. ಮಾಡಿದ್ದರೆ ಏನೇನೋ ಮಾಡಬಹುದಿತ್ತು. ಕಾಂಗ್ರೆಸ್ ಪಕ್ಷ ಇದ್ದರೆ, ನಾವು ನೀವು ಇರುತ್ತೇವೆ. ನಾನು ಉಪಮುಖ್ಯಮಂತ್ರಿಯಾಗಿರುವುದು, ದದ್ದಲ್ ಅವರು ಶಾಸಕರು ಹಾಗೂ ಅಧ್ಯಕ್ಷರಾಗಿದ್ದಾರೆ. ಬೋಸರಾಜು ಅವರು ಶಾಸಕರಲ್ಲದಿದ್ದರೂ ಅವರನ್ನು ಸಚಿವರಾನ್ನಾಗಿ ಮಾಡಲಾಗಿದೆ. ಆವರು 45 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ತೆಲಂಗಾಣದಲ್ಲಿ ದುಡಿದಿದ್ದಾರೆ. ಹಗಲು ರಾತ್ರಿ ಪಕ್ಷ ಸಂಘಟನೆ ಮಾಡಿದ್ದಾರೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net