ಆರೋಗ್ಯ ಸೇತು ಆ್ಯಪ್​ ಹಸಿರಾಗಿದ್ದರೆ ಕ್ವಾರಂಟೈನ್​ ಅಗತ್ಯವಿಲ್ಲ

GST ಅಡಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
hardeep singh puri
Published on

ನವದೆಹಲಿ: ವಿಮಾನದ ಪ್ರಯಾಣಿಕರ ಮೊಬೈಲ್​ನಲ್ಲಿರುವ ಆರೋಗ್ಯ ಸೇತು ಆ್ಯಪ್​ ಹಸಿರು ಬಣ್ಣ ತೋರುತ್ತಿದ್ದರೆ ಅಂಥವರನ್ನು ಕ್ವಾರಂಟೈನ್​ಗೆ ಕಳುಹಿಸುವ ಅಗತ್ಯವಾದರೂ ಏನು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್​ಸಿಂಗ್​ ಪುರಿ ಪ್ರಶ್ನಿಸಿದ್ದಾರೆ.
ಸೋಮವಾರದಿಂದ ದೇಶಾದ್ಯಂತ ದೇಶಿಯ ವಿಮಾನ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಮಾನಗಳನ್ನು ಆನ್​ಲೈನ್​ ಮೂಲಕ ಪರಿಹರಿಸಿದರು.

ಆಗಸ್ಟ್​ ಅಥವಾ ಸೆಪ್ಟೆಂಬರ್​ ಆರಂಭಕ್ಕೂ ಮುನ್ನವೇ ಸಂಪೂರ್ಣವಾಗಿ ಅಲ್ಲದಿದ್ದರೂ ಸಾಕಷ್ಟು ಸಂಖ್ಯೆಯ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಆರಂಭಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಆಗಿನ ಪರಿಸ್ಥಿತಿಯನ್ನು ಆಧರಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಆದರೆ ಹರ್ದೀಪ್​ ಸಿಂಗ್​ ಪುರಿ ಅವರ ಹೇಳಿಕೆಯನ್ನು ಖಂಡಿಸಿರುವ ಕೇರಳ, ಕರ್ನಾಟಕ ಮತ್ತು ಅಸ್ಸಾಂ ಸೇರಿ ಆರು ರಾಜ್ಯಗಳು ಏನೇ ಆದರೂ ಅನ್ಯ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸುವುದಾಗಿ ಹೇಳಿವೆ.

ಶುಕ್ರವಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕರ್ನಾಟಕ ಅತಿಹೆಚ್ಚು ಕರೊನಾ ಸೋಂಕಿತರು ಇರುವ ರಾಜ್ಯಗಳಿಂದ ವಿಮಾನದಲ್ಲಿ ಬರುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್​ಗೆ ಹಾಗೂ 7 ದಿನ ಹೋಂ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ಹೇಳಿತ್ತು.
ತಮಿಳುನಾಡಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಜತೆಗೆ ನಗರ ಸಾರಿಗೆ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಹೀಗಾಗಿ, ವಿಮಾನದಲ್ಲಿ ಬರುವ ಪ್ರಯಾಣಿಕರಿಗೆ ತಮ್ಮ ಮನೆಗಳಿಗೆ ತೆರಳಲು ಕಷ್ಟವಾಗಬಹುದು. ಆದ್ದರಿಂದ, ಚೆನ್ನೈಗೆ ವಿಮಾನಯಾನ ಆರಂಭಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿಕೊಂಡಿತ್ತು.

ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ವಿಮಾನ ಹತ್ತುವ ಮುನ್ನ ಪ್ರತಿಯೊಬ್ಬ ಪ್ರಯಾಣಿಕರ ದೇಹದ ಉಷ್ಣಾಂಶ ಪರಿಶೀಲಿಸಲಾಗುವುದು. ಆರೋಗ್ಯ ಸೇತು ಆ್ಯಪ್​ ಕೆಂಪು ಬಣ್ಣವನ್ನು ಸೂಚಿಸುತ್ತಿದ್ದರೆ ಅಂಥವರಿಗೆ ವಿಮಾನ ಹತ್ತಲು ಅವಕಾಶ ನೀಡುವುದಿಲ್ಲ. ಆದ್ದರಿಂದ, ಅವರನ್ನು ರೈಲು ಮತ್ತು ಬಸ್​ಗಳ ಪ್ರಯಾಣಿರಂತೆ ಪರಿಗಣಿಸಬೇಕು. ಕ್ವಾರಂಟೈನ್​ ವಿಷಯವಾಗಿ ಅದೇಕೆ ಇಷ್ಟು ಗೊಂದಲ ಮಾಡಿಕೊಳ್ಳಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​ ಪುರಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net