ಅಮೆರಿಕ ಯುದ್ಧ ಬಯಸಿದರೆ ಹೋರಾಡಲು ನಾವು ಸಿದ್ಧ; ಟ್ರಂಪ್​ಗೆ ಚೀನಾದಿಂದ ಎಚ್ಚರಿಕೆ ಸಂದೇಶ | Chinese Embassy

Untitled design (94)
Published on

ಬೀಜಿಂಗ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​​ ಶೇ.100 ಪರಸ್ಪರ ಸುಂಕ ವಿಧಿಸುವುದಾಗಿ ಘೋಷಿಸಿದ ಮೇಲೆ ಚೀನಾ ಅಮೆರಿಕಕ್ಕೆ ಇದುವರೆಗಿನ ಅತಿದೊಡ್ಡ ಬೆದರಿಕೆಯನ್ನು ನೀಡಿದೆ. ಅಮೆರಿಕ ಯುದ್ಧ ಬಯಸಿದರೆ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿ(Chinese Embassy) ಹೇಳಿದೆ.

ಸುಂಕಕ್ಕೆ ಸಂಬಂಧಿಸಿದಂತೆ ವಿವಾದ ಆರಂಭವಾದ ನಂತರ ಚೀನಾದಿಂದ ಈ ಹೇಳಿಕೆ ಬಂದಿದೆ. ಅಮೆರಿಕವು ಯುದ್ಧವನ್ನು ಬಯಸಿದರೆ ಅದು ಸುಂಕ ಯುದ್ಧವಾಗಲಿ, ವ್ಯಾಪಾರ ಯುದ್ಧವಾಗಲಿ, ಯಾವುದೇ ರೀತಿಯ ಯುದ್ಧವಾಗಲಿ ನಾವು ಕೊನೆಯವರೆಗೂ ಹೋರಾಡಲು ಸಿದ್ಧರಿದ್ದೇವೆ ಎಂದು ಚೀನಾ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ರಫ್ತಿನ ಮೇಲೆ ಎರಡನೇ ಸುತ್ತಿನ ಶೇ.10ರಷ್ಟು ಸುಂಕ ವಿಧಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಮಂಗಳವಾರ ಅಮೆರಿಕದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.15ರಷ್ಟು ಸುಂಕ ವಿಧಿಸಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ವಾಷಿಂಗ್ಟನ್ ವಿರುದ್ಧ ಕಾನೂನು ಕ್ರಮಕೈಗೊಂಡಿದೆ.

ವಾಷಿಂಗ್ಟನ್ ಚೀನಾವನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಚೀನಾ ರಾಯಭಾರ ಕಚೇರಿ ಹೇಳಿದೆ. ಅಮೆರಿಕ ನಿಜವಾಗಿಯೂ ಫೆಂಟನಿಲ್ ಸಮಸ್ಯೆಯನ್ನು ಪರಿಹರಿಸಲು ಬಯಸಿದರೆ ಚೀನಾದೊಂದಿಗೆ ಸಮಾಲೋಚಿಸುವುದು ಸರಿಯಾದ ಕೆಲಸ. ಅಮೆರಿಕವು ಯುದ್ಧವನ್ನು ಬಯಸಿದರೆ ಅದು ಸುಂಕ ಯುದ್ಧ, ವ್ಯಾಪಾರ ಯುದ್ಧ ಅಥವಾ ಯಾವುದೇ ರೀತಿಯ ಯುದ್ಧವಾಗಿರಬಹುದು. ನಾವು ಕೊನೆಯವರೆಗೂ ಹೋರಾಡಲು ಸಿದ್ಧರಿದ್ದೇವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ಪರಸ್ಪರರ ಕಳವಳಗಳನ್ನು ಪರಿಹರಿಸಲು ಚೀನಾ ಅಮೆರಿಕದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ. ಮಾರ್ಚ್ 10ರಿಂದ ಜಾರಿಗೆ ಬರುವಂತೆ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕೆಲವು ಉತ್ಪನ್ನಗಳ ಮೇಲೆ ಚೀನಾ ಹೆಚ್ಚುವರಿ ಸುಂಕ ವಿಧಿಸಲಿದೆ ಎಂದು ಚೀನಾದ ಕಸ್ಟಮ್ಸ್ ಆಯೋಗ ಮಂಗಳವಾರ ತಿಳಿಸಿದೆ.

ಫೆಂಟನಿಲ್ ಬಿಕ್ಕಟ್ಟಿಗೆ ಅಮೆರಿಕವೇ ಕಾರಣ, ಬೇರೆ ಯಾರೂ ಅಲ್ಲ. ಮಾನವೀಯತೆ ಮತ್ತು ಅಮೆರಿಕದ ಜನರ ಬಗ್ಗೆ ಸದ್ಭಾವನೆಯ ಮನೋಭಾವದಿಂದ ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಅಮೆರಿಕಕ್ಕೆ ಸಹಾಯ ಮಾಡಲು ನಾವು ದೃಢವಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಪ್ರಯತ್ನಗಳನ್ನು ಗುರುತಿಸುವ ಬದಲು ಅಮೆರಿಕವು ಚೀನಾದ ಮೇಲೆ ಆರೋಪ ಹೊರಿಸಲು ಮತ್ತು ಸುಂಕ ಹೆಚ್ಚಳದ ಮೂಲಕ ಚೀನಾದ ಮೇಲೆ ಒತ್ತಡ ಹೇರಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ನೀಡಿದ್ದಾರೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net