

IED Blast: ಜಾರ್ಖಂಡ್ನ ಪಶ್ಚಿಮ ಸಿಂಗ್ ಭೂಮ್ನ ಸಾರಂಡಾ ಅರಣ್ಯದಲ್ಲಿ ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟಗೊಂಡು 209 ಕೋಬ್ರಾ ಬೆಟಾಲಿಯನ್‌ನ ಇಬ್ಬರು ಸಿಆರ್ಪಿಎಫ್ ಸಿಬ್ಬಂದಿಗೆ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದಲ್ಲಿ ರಾಂಚಿಗೆ ಕರೆದೊಯ್ಯಲಾಗಿದೆ ಎಂದು ಇಂದು(ಆಗಸ್ಟ್ 8) ವರದಿಯಾಗಿದೆ.
ಜರೈಕೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಂಡಾ ಅರಣ್ಯದ ಹಿಂದೂಕೋಚಾ ಗ್ರಾಮದ ಬಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ರಾಜ್ಯ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಕೋಬ್ರಾ ಬೆಟಾಲಿಯನ್‌ನ ಜಂಟಿ ತಂಡ ನಡೆಸಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಗಾಯಾಳು ಯೋಧರನ್ನು ರಾಮ್ ಪ್ರವೇಶ್ ಸಿಂಗ್ ಮತ್ತು ಛೋಟು ಕಶ್ಯಪ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಜಾರ್ಖಂಡ್ ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡಗಳುಕೂಂಬಿಂಗ್ ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮಾವೋವಾದಿಗಳು ಕಾಡಿನಲ್ಲಿ ಐಇಡಿಗಳನ್ನು ಇಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 2ರ ತಡರಾತ್ರಿ ಚಕ್ರಧರಪುರ ರೈಲು ವಿಭಾಗದ ಕರಂಪಾಡ ಮತ್ತು ರೆಂಗ್ಡಾ ರೈಲ್ವೆ ನಿಲ್ದಾಣದ ನಡುವೆ ಮಾವೋವಾದಿಗಳು ರೈಲ್ವೆ ಹಳಿಯ ಒಂದು ಭಾಗವನ್ನು ಸ್ಫೋಟಿಸಿದ್ದರು. ಅದೃಷ್ಟವಶಾತ್ ದೊಡ್ಡ ಹಾನಿಯಾಗಲಿಲ್ಲ. ಸರಕು ರೈಲುಗಳ ಸಂಚಾರವನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
ಜುಲೈ 3 ರಂದು ನಡೆದ ಮತ್ತೊಂದು ಘಟನೆಯಲ್ಲಿ ಚಕ್ರಧರಪುರ ರೈಲು ವಿಭಾಗದ ಒಡಿಶಾ-ಜಾರ್ಖಂಡ್ ಗಡಿಯಲ್ಲಿರುವ ವಿಮಲ್‌ಗಢ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟಗೊಂಡು ಒಬ್ಬ ಗ್ಯಾಂಗ್‌ಮ್ಯಾನ್ ಸಾವನ್ನಪ್ಪಿದರು. ಇನ್ನೊಬ್ಬರು ಗಾಯಗೊಂಡರು.
ಮಾವೋವಾದಿಗಳು ಈಗ ಹೆಚ್ಚಾಗಿ ಸಾರಂಡಾ ಕಾಡಿನಲ್ಲಿ ಬೀಡು ಬಿಟ್ಟಿದ್ದು, ಅಂದಾಜು 85 ರಿಂದ 90 ಮಾವೋದಿಗಳು ಅಲ್ಲಿದ್ದಾರೆ ಎನ್ನಲಾಗಿದೆ. ಕಾಡಿನ ಸುತ್ತ ಐಇಡಿ ಇರಿಸಿದ್ದು, ಭದ್ರತಾ ಪಡೆಗಳಿಗೆ ಇದು ದೊಡ್ಡ ಸವಾಲಾಗಿ ಪರಣಿಮಿಸಿದೆ. (ಏಜೆನ್ಸೀಸ್)