ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಗುರುತಿಸಿ

street vendors
ಬೀದಿ ಬದಿ ವ್ಯಾಪಾರಿಗಳು ವಹಿವಾಟು ನಡೆಸಲು ಸೂಕ್ತ ಸ್ಥಳ ಗುರುತಿಸುವಂತೆ ಒತ್ತಾಯಿಸಿ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಬಿ.ಅಶೋಕ್‌ಕುಮಾರ್, ಚನ್ನವೀರಪ್ಪ ಗಾಮನಗಟ್ಟಿ, ವಿನಯ್‌ಕುಮಾರ್, ಚಂದ್ರಕಲಾ, ಶೇಷಯ್ಯ, ನಾರಾಯಣ ಮುಂತಾದವರಿದ್ದರು.
Published on

ಶಿವಮೊಗ್ಗ: ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಗುರುತಿಸಿ ಅಲ್ಲಿ ವಹಿವಾಟು ನಡೆಸಲು ಅನುಕೂಲ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬೀದಿ ಬದಿ ವ್ಯಾಪಾರಿಗಳ ಪರವಾಗಿ ಪಟ್ಟಣ ಮಾರಾಟ ಸಮಿತಿ ಸದಸ್ಯರು ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕನ್ಸರ‌್ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಅಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಮೊದಲು ಸಮರ್ಪಕವಾಗಿ ಬೀದಿ ಬದಿ ವ್ಯಾಪಾರಕ್ಕೆ ಸ್ಥಳ ಗುರುತಿಸಬೇಕು. ಈಗಾಗಲೇ ಕೆಲವು ಕನ್ಸರ‌್ವೆನ್ಸಿಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಅಲ್ಲಿ ಮೂಲ ಸೌಲಭ್ಯಗಳನ್ನೇ ಕಲ್ಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೀದಿ ಬದಿ ವ್ಯಾಪಾರಿಗಳ ಪೈಕಿ ಎಲ್ಲರಿಗೂ ಗುರುತಿನ ಚೀಟಿ ಸಿಕ್ಕಿಲ್ಲ. ವಿನೋಬನಗರದ ಶಿವಾಲಯ ದೇವಾಲಯದ ಬಳಿ ಇರುವ 70 ಮಳಿಗೆಗಳಲ್ಲಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಟಿವಿಸಿ ಸದಸ್ಯರನ್ನು ಹೊರತುಪಡಿಸಿ ಮಳಿಗೆ ಹಂಚಿಕೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಬಗ್ಗೆ ತರಬೇತಿ ನೀಡಬೇಕು. ಪಿಎಂ ಸ್ವನಿಧಿ ಯೋಜನೆ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.
ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ಚನ್ನವೀರಪ್ಪ ಗಾಮನಗಟ್ಟಿ, ಎಸ್.ಬಿ.ಅಶೋಕ್‌ಕುಮಾರ್, ನಾರಾಯಣ, ವಿನಯಕುಮಾರ್, ಮಹಮ್ಮದ್ ಇಸ್ಮಾಯಿಲ್, ಶೇಷಯ್ಯ, ಚಂದ್ರಕಲಾ ಮುಂತಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net