

ಶಿವಮೊಗ್ಗ: ಜೋಗ ಜಲಪಾತ ಸೇರಿ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರವಾಸಿತಾಣ ಗುರುತಿಸಿದ್ದು ಅಲ್ಲಿ ಮೂಲಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ 120 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಉನ್ನತಿಗೆ ವಿಪುಲ ಅವಕಾಶಗಳಿವೆ. ರಾಜ್ಯದ ಇತರ ಪ್ರವಾಸಿ ಕ್ಷೇತ್ರಗಳಂತೆ ಜಿಲ್ಲೆ ರೂಪಿಸಬೇಕಿದೆ. ಇದರಿಂದ ವಿಶ್ವದ ಭೂಪಟದಲ್ಲಿ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದು. ಇಲ್ಲಿನ ಜನರ ಜೀವನ ಗುಣಮಟ್ಟ ಸುಧಾರಣೆ ಕಂಡುಕೊಳ್ಳಬಹುದು. ಆ ನಿಟ್ಟಿನಲ್ಲಿ ಸಚಿವ ಮಧು ಬಂಗಾರಪ್ಪ ಅವರು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಗುರುತಿಸಿರುವ ಸ್ಥಳಗಳಿಗೆ ಪ್ರವಾಸಿಗರು ಹೋಗಿ ಬರಲು ಅನುಕೂಲವಾಗುವಂತೆ ಹಾಗೂ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲಸೌಕರ್ಯಗಳಾದ ರಸ್ತೆ, ಪ್ರಚಾರ ಫಲಕ, ಕಿರುಮಾಹಿತಿ, ಮಾರ್ಗಗಳ ವಿವರ, ಶೌಚಗೃಹ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತಿಸಲಾಗಿದೆ. ಗುರುತಿಸಿರುವ ಹಾಗೂ ಅಜ್ಞಾತವಾಗಿರುವ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳು ಮತ್ತು ಆಸಕ್ತರನ್ನೊಳಗೊಂಡು ವಿವಿಧ ಕಾರ್ಯಕ್ರಮ ರೂಪಿಸಿ ಜನಸಾಮಾನ್ಯರಿಗೆ ಪರಿಚಯಿಸಲಾಗುವುದು ಎಂದರು.
ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನ ನಿಮಿತ್ತ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿ ಹೋಟೆಲ್ ಮಾಲೀಕರು, ಟ್ಯಾಕ್ಸಿ ಮಾಲೀಕರು, ಬಸ್ ಮಾಲೀಕರು, ಯೂಟೂಬರ್ಸ್, ಛಾಯಾಗ್ರಾಹಕರು, ಸಾಹಸ-ಕ್ರೀಡಾ ಕೇಂದ್ರಗಳ ನಿರ್ವಾಹಕರು ಸೇರಿ ಮತ್ತಿತರೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜನರ ಸಹಭಾಗಿತ್ವದಡಿ ವಿನೂತನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.