ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉಪಾಯಗಳು: ಧನ್ವಂತರಿ

Dr
Published on

ಒಂದು ವರ್ಷದಿಂದ ನಾವೆಲ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆಯೇ ಯೋಚಿಸುತ್ತಿದ್ದೇವೆ. ಆದರೆ ಒಂದಿಷ್ಟು ಮಾತ್ರೆಗಳನ್ನು ನುಂಗಿಬಿಟ್ಟರೆ ಅದು ಹೆಚ್ಚುತ್ತದೆ ಎಂಬ ಕಲ್ಪನೆ ತಪ್ಪು. ಸರಿಯಾದ ಕಾಳಜಿ ವಹಿಸಿದರೆ ವೈರಸ್ ಅಥವಾ ಫಂಗಸ್ ವಿರುದ್ಧವಷ್ಟೇ ಅಲ್ಲ, ಯಾವುದೇ ಕಾಯಿಲೆಯೂ ಹತ್ತಿರ ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

  1. ಆಹಾರ: ಆಯುರ್ವೆದ ಹೇಳುವಂತೆ ದೇಹದ ಪ್ರತಿ ಕಣಕಣವೂ ನಮ್ಮ ಆಹಾರದ ಮೇಲೆಯೇ ಅವಲಂಬಿತವಾಗಿದೆ. ಆಹಾರ ಚೆನ್ನಾಗಿದ್ದರೆ ದೇಹ ತನ್ನಿಂದ ತಾನೇ ಸ್ವಾಸ್ಥ್ಯವನ್ನು ಹೊಂದುತ್ತದೆ. ಹಣ್ಣು, ತರಕಾರಿಗಳು, ನಟ್​ಗಳು ಮುಂತಾದ ನಿಸರ್ಗದತ್ತ ಆಹಾರಗಳಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಹೇರಳವಾಗಿರುತ್ತವೆ. ಅವುಗಳನ್ನು ಸರಿಯಾಗಿ ಸೇವಿಸುವವನಿಗೆ ಮಾತ್ರೆಗಳ ಅವಶ್ಯಕತೆ ಕಡಿಮೆಯಿರುತ್ತದೆ. ಪ್ರಕೃತಿ ನಮಗೆ ಕೊಡುವ ನೈಸರ್ಗಿಕ ಆಹಾರ ಪದಾರ್ಥಗಳನ್ನು ಆಯಾ ಕಾಲಕ್ಕೆ ಸೇವಿಸುತ್ತ ಬಂದರೆ ಅದಕ್ಕಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿವರ್ಧಕ ಇನ್ನೊಂದಿಲ್ಲ. ಮಾವು, ಹಲಸು, ದಾಳಿಂಬೆ, ನೇರಳೆ ಮುಂತಾದ ಹಣ್ಣುಗಳನ್ನು ಆಯಾ ಕಾಲಕ್ಕೆ ಸೇವಿಸುವುದರಿಂದ ಆ ಕಾಲದಲ್ಲಿ ನಮ್ಮ ದೇಹಕ್ಕೆ ಯಾವ ಪೋಷಕಾಂಶ ಹೆಚ್ಚು ಬೇಕೋ ಅದು ಸಿಗುತ್ತದೆ. ಎಷ್ಟೋ ಜನರ ಊಟವೆಂದರೆ ಅನ್ನ -ಮೊಸರು ಅಥವಾ ಅನ್ನ - ಸಾರು. ಆದರೆ ಅದು ಅಪೂರ್ಣವಾದದ್ದು. ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್, ಕೊಬ್ಬು ಮತ್ತು ಸೂಕ್ಶ್ಮ ಪೋಷಕಾಂಶಗಳನ್ನು ಸೇವಿಸಲೇಬೇಕು. ಹಾಗಾಗಿ ಶುದ್ಧ ಎಣ್ಣೆ, ತುಪ್ಪ, ಹಣ್ಣುಗಳು, ಬೇಳೆ ಕಾಳುಗಳ ಸೇವನೆ ಅತ್ಯಂತ ಆವಶ್ಯಕ. ಮಾಂಸಾಹಾರಿಗಳಾಗಿದ್ದರೆ ವಾರಕ್ಕೊಂದೆರಡು ಬಾರಿ ರಾಸಾಯನಿಕ ರಹಿತ ಬೇಯಿಸಿದ ಮಾಂಸಾಹಾರವನ್ನು ಸೇವಿಸುವುದು ಹಿತಕಾರಿ. ಎಲ್ಲವೂ ಒಳ್ಳೆಯದೇ ಆದರೂ ಪ್ರಮಾಣದಲ್ಲಿ ಮಿತಿಯೂ ಅಗತ್ಯ.

2. ವ್ಯಾಯಾಮ: ಒಂದೆರಡು ತಲೆಮಾರುಗಳ ಹಿಂದಿನವರಿಗೆ ಇರದಿದ್ದ ಕಾಯಿಲೆಗಳೆಲ್ಲ ನಮ್ಮನ್ನೇಕೆ ಕಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೂ ಅವರಿಗೂ ದೈಹಿಕ ವ್ಯಾಯಾಮದಲ್ಲಿರುವ ಅಗಾಧ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ವ್ಯಾಯಾಮದಿಂದ ಸಿಗುವ ರೋಗ ನಿರೋಧಕ ಶಕ್ತಿಯನ್ನು ಹಣ ಕೊಟ್ಟು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಯೋಗಾಸನ, ಪ್ರಾಣಾಯಾಮ, ನಡಿಗೆ ಮುಂತಾದವುಗಳನ್ನು ನಿತ್ಯವೂ ಮಾಡುವುದು ಇಮ್ಯುನಿಟಿ ಹೆಚ್ಚಾಗಲು ಅತ್ಯಂತ ಅವಶ್ಯವಾದದ್ದು.

3. ದಿನಚರಿ: ಶಿಸ್ತಿಲ್ಲದ ದಿನಚರಿಯಿಂದ ನಮಗೇ ಗೊತ್ತಿಲ್ಲದೇ ನಮ್ಮ ರೋಗ ನಿರೋಧಕ ಶಕ್ತಿ ತುಸುತುಸುವಾಗಿ ನಾಶವಾಗುತ್ತ ಹೋಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಹಿಡಿದು ರಾತ್ರಿ ಬೇಗ ಮಲಗುವವರೆಗೆ ಎಲ್ಲಾ ರೀತಿಯ ದಿನಚರಿಗಳನ್ನು ಸರಿಯಾಗಿ ಪಾಲಿಸುವವನಿಗೆ ಸುಲಭವಾಗಿ ರೋಗ ಬಾರದೆಂದು ಆಯುರ್ವೆದ ಹೇಳುತ್ತದೆ. ಗಂಡೂಷ (ಆಯಿಲ್ ಪುಲ್ಲಿಂಗ್), ಅಭ್ಯಂಗ (ಎಣ್ಣೆ ಸ್ನಾನ), ಧ್ಯಾನ, ನಿಗದಿತ ಸಮಯದಲ್ಲಿ ಆಹಾರ ಸೇವನೆ, ಮಲಮೂತ್ರಾದಿ ಪ್ರಕೃತಿಯ ಕರೆಗಳನ್ನು ತಡೆಯದೇ ಇರುವುದು, ಇವನ್ನೆಲ್ಲ ಸರಿಯಾಗಿ ಪಾಲಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಸಾಬೀತಾಗಿರುವ ವಿಷಯ.

4. ಮನಸ್ಸು: ದೇಹದ ನೂರು ಪಟ್ಟು ಶಕ್ತಿಯುತವಾದದ್ದು ಮನಸ್ಸು. ಭಯ, ಚಿಂತೆ, ಅಸೂಯೆ ಇಂತಹ ಋಣಾತ್ಮಕ ಶಕ್ತಿಗಳು ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ಸಾಂಕ್ರಾಮಿಕ ರೋಗಗಳು ಹರಡಿದಾಗ ಭಯವು ಇಮ್ಯುನಿಟಿಯನ್ನು ಕಡಿಮೆಗೊಳಿಸಿ ಹೆಚ್ಚೆಚ್ಚು ಜನರು ಸಮಸ್ಯೆಗೆ ಒಳಗಾಗುತ್ತಾರೆ ಎಂಬುದು ಸಾಬೀತಾಗಿದೆ. ಹಾಗಾಗಿ ಸಾಧ್ಯವಾದಷ್ಟು ಪ್ರೀತಿ, ತೃಪ್ತಿ, ಶಾಂತ ಮನಸ್ಥಿತಿಯನ್ನು ತಂದುಕೊಳ್ಳಬೇಕಾಗಿದೆ.

5. ಚಟರಹಿತ ಜೀವನಶೈಲಿ: ಉತ್ತಮ ಗುಣಗಳನ್ನು ಹೊಂದಿರುವ ಆಹಾರಗಳು ಚಟವಾಗುವುದಿಲ್ಲ. ಒಂದು ದಿನ ಬಿಟ್ಟರೆ ತಳಮಳ ಅಥವಾ ವಿಚಿತ್ರ ಸಮಸ್ಯೆಗಳೇನೂ ಆಗುವುದಿಲ್ಲ. ಆದರೆ ವಿಷವನ್ನು ಹೊಂದಿದ ಆಹಾರ ಪದಾರ್ಥಗಳ ಸೇವನೆ ರೂಢಿಯಾದರೆ ಬಿಡುವುದು ಕಷ್ಟವಾಗುತ್ತದೆ. ಹಾಗಾಗಿಯೇ ತಂಬಾಕು, ಮದ್ಯಗಳಂತಹವು ಚಟವಾಗುವುದು. ಈ ವಿಷದ್ರವ್ಯಗಳ ಸೇವನೆಯಿಂದ ದೇಹದಲ್ಲಿರುವ ಓಜಸ್ಸು ಕ್ಷೀಣವಾಗಿ ರೋಗ ನಿರೋಧಕ ಶಕ್ತಿ ನಾಶವಾಗಿ ಹೋಗುತ್ತದೆ ಎನ್ನುತ್ತದೆ ಆಯುರ್ವೆದ. ಹಾಗಾಗಿ ಇವುಗಳನ್ನು ತ್ಯಜಿಸಬೇಕಾದ್ದು ಅತ್ಯಂತ ಅವಶ್ಯಕ. ಇಲ್ಲದೇ ಹೋದರೆ ವೈರಸ್ ಅಥವಾ ಫಂಗಸ್​ಗಳಷ್ಟೇ ಅಲ್ಲ ಎಲ್ಲಾ ರೀತಿಯ ಕಾಯಿಲೆಗಳೂ ನಮ್ಮನ್ನು ಕಾಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net