

ಪ್ರಾಣಾಯಾಮ ಎಂಬ ಶಬ್ದವು ಪ್ರಾಣ ಮತ್ತು ಆಯಾಮ ಎಂಬ ಎರಡು ಮೂಲ ಪದಗಳಿಂದ ಕೂಡಿದೆ. ಪ್ರಾಣ ಎಂದರೆ ‘ಜೀವಾಧಾರ ಶಕ್ತಿ’ ಅಥವಾ ‘ಜೈವಿಕ ಶಕ್ತಿ’. ಈ ಶಕ್ತಿಯು ಜೈವಿಕ ಅಜೈವಿಕ ಎಂಬ ವ್ಯತ್ಯಾಸವಿಲ್ಲದೆ ಎಲ್ಲದರಲ್ಲಿಯೂ ಇರುತ್ತದೆ. ಇದು ನಾವು ಉಸಿರಾಡುವ ಗಾಳಿಗೆ ನಿಕಟವಿದ್ದರೂ ವಾಯು ಅಥವಾ ಆಮ್ಲಜನಕಕ್ಕಿಂತಲೂ ಸೂಕ್ಷ್ಮವಾಗಿದೆ. ಆದ್ದರಿಂದ ಪ್ರಾಣಾಯಾಮವನ್ನು ಕೇವಲ ಶ್ವಾಸಕೋಶಗಳಿಗೆ ಹೆಚ್ಚಿನ ಆಮ್ಲಜನಕ ಪೂರೈಸುವ ಉಸಿರಾಟದ ವ್ಯಾಯಾಮವೆಂದು ತಿಳಿಯಬಾರದು. ಪ್ರಾಣಾಯಾಮವು ನಾಡಿಗಳಲ್ಲಿ ಅಥವಾ ಪ್ರಾಣಮಯಕೋಶದ ಅಥವಾ ಚೈತನ್ಯ ಶರೀರದ ಶಕ್ತಿವಾಹಿನಿಗಳಲ್ಲಿ ಪ್ರಾಣದ ಹರಿವನ್ನು ಪ್ರಭಾವಿಸುವುದಕ್ಕಾಗಿ ಉಸಿರಾಟವನ್ನು ಬಳಸಿಕೊಳ್ಳುತ್ತದೆ.
ಮೂಲ ಚೈತನ್ಯ ಶಕ್ತಿ: ‘ಪ್ರಾಣಸ್ಯ ಆಯಾಮ’ ಎಂದರೆ ಪ್ರಾಣವನ್ನು ವಿಸ್ತರಿಸುವುದು ಈ ಮೂಲಕ ವಶಪಡಿಸಿಕೊಳ್ಳುವುದು. ಯೋಗ ಅರ್ಥದಲ್ಲಿ ಪ್ರಾಣ ಎಂದರೆ ಸಮಸ್ತ ಸೃಷ್ಟಿಯ ಮೂಲ ಚೈತನ್ಯ ಶಕ್ತಿ. ಅದು ನಮ್ಮೆಲ್ಲ ಚಟುವಟಿಕೆಗಳ ಚಾಲಕ ಹಾಗೂ ನಿಯಂತ್ರಕವಾಗಿದೆ. ಈ ಪ್ರಾಣಶಕ್ತಿ ನಮ್ಮ ದೇಹದಲ್ಲಿ ಹರಿಯುವ ಮಾರ್ಗಗಳಿಗೆ ‘ನಾಡಿ’ ಎನ್ನುತ್ತೇವೆ. ಪ್ರಾಣಮಯ ಕೋಶದಲ್ಲಿ ಸೂಕ್ಷಾ್ಮತಿಸೂಕ್ಷ್ಮವಾದ ಎಪ್ಪತ್ತೆರಡು ಸಹಸ್ರ ನಾಡಿಗಳಿವೆ. ಇವುಗಳಲ್ಲಿ ಮೂರು ನಾಡಿಗಳು ಹೆಚ್ಚು ಪರಿಣಾಮಕಾರೀ ಕಾರ್ಯ ನಿರ್ವಹಿಸುವಂಥವು. ಇಡಾ, ಪಿಂಗಳ ಮತ್ತು ಸುಷುಮ್ನ ನಾಡಿಗಳೆಂದು ಇವುಗಳನ್ನು ಕರೆಯುತ್ತಾರೆ. ಮೂಗಿನ ಎಡಹೊಳ್ಳೆಯನ್ನು ಇಡಾನಾಡಿ ಅಥವಾ ಚಂದ್ರನಾಡಿ ಎಂದೂ, ಬಲಹೊಳ್ಳೆಯನ್ನು ಸೂರ್ಯನಾಡಿ ಅಥವಾ ಪಿಂಗಲನಾಡಿ ಎಂದೂ ಕರೆಯುತ್ತಾರೆ. ಶರೀರದ ತಂಪನ್ನು ರಕ್ಷಿಸುವುದು ಚಂದ್ರನಾಡಿಯ ಕೆಲಸವಾದರೆ ಉಷ್ಣತೆಯನ್ನು ಕಾಪಾಡುವುದು ಸೂರ್ಯನಾಡಿಯ ಕೆಲಸ. ಮೇರುದಂಡದ ಕೆಳಭಾಗದಿಂದ ಮೇಲು ನೆತ್ತಿಯ ಭಾಗದವರೆಗೂ ಮಧ್ಯದಲ್ಲಿ ಸುಷುಮ್ನನಾಡಿ ಇದ್ದು ಇದರ ಅಕ್ಕಪಕ್ಕದಲ್ಲಿ ಸೂರ್ಯಚಂದ್ರ ನಾಡಿಗಳಿವೆ. ಇವುಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಪ್ರಾಣಾಯಾಮ ಪೂರಕ.
1. ಹಠಯೋಗ ಪದ್ಧತಿ: ಇದರಲ್ಲಿ ಕುಂಭಕ ಪ್ರಧಾನ. ಸರಿಯಾದ ಕ್ರಮದಲ್ಲಿ ಅಭ್ಯಾಸವಿಲ್ಲದಿದ್ದರೆ ಅಪಾಯ ಬರಬಹುದು.
2. ವಾಸಿಷ್ಠ ಯೋಗ ಪದ್ಧತಿ: ಇದರಲ್ಲಿ ಹಠಹಿಡಿದು ಉಸಿರು ಕಟ್ಟುವ ಕ್ರಮವಿಲ್ಲ. ನಿಧಾನ, ಕ್ರಮಬದ್ಧ, ಸುಗಮ ಉಸಿರಾಟಕ್ಕೆ ಪ್ರಾಧಾನ್ಯ.
* ವಾತಾವರಣ ಅತ್ಯಂತ ಶುದ್ಧವಾಗಿರಲಿ. ಕಲ್ಮಶ ರಹಿತ ಪರಿಸರ ಅಗತ್ಯ.
* ಆಸನಗಳ ಮೊದಲೂ ಅಥವಾ ನಂತರವೂ ಪ್ರಾಣಾಯಾಮವನ್ನು ಅಭ್ಯಾಸ ಮಾಡಬಹುದು. ಆಸನಗಳಲ್ಲಿ ಸ್ಥಿರತೆಯು ಬಂದ ನಂತರ ಪ್ರಾಣಾಯಾಮದ ಅಭ್ಯಾಸ ಉತ್ತಮ. ಆಸನಾಭ್ಯಾಸದ ನಂತರ ದೀರ್ಘ ವಿಶ್ರಾಂತಿ ಪಡೆದು ನಂತರ ಪ್ರಾಣಾಯಾಮದ ಅಭ್ಯಾಸ ಮಾಡುವುದು ಒಳಿತು.
* ಸಾಧ್ಯವಾದಲ್ಲಿ ಪದ್ಮಾಸನ, ವಜ್ರಾಸನ ಅಪೇಕ್ಷಿತ. ಸಾಧ್ಯವಾಗದಿದ್ದಲ್ಲಿ ಸುಖಾಸನದಲ್ಲಿ ಬೆನ್ನು ನೇರ, ಕುತ್ತಿಗೆ ನೇರ ಇಟ್ಟುಕೊಳ್ಳುವುದು ಅಗತ್ಯ.