

ನವದೆಹಲಿ: ಕರೊನಾ ರೋಗಿಗಳ ಚಿಕಿತ್ಸೆಗೆ ಲೊಪಿನ್ವಿರ್/ರಿಟೊನವಿರ್ ಔಷಧವನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಒಪ್ಪಿಗೆ ನೀಡಿದೆ.
ಈ ನಿರ್ದಿಷ್ಟ ಔಷಧವನ್ನು ಈಗ ಸದ್ಯಕ್ಕೆ ಎಚ್‌ಐವಿ/ಏಡ್ಸ್ ರೋಗಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಈ ಕುರಿತು ಐಸಿಎಂಆರ್ ಗುರುವಾರ ವಿಸ್ತೃತ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.
ಇದಲ್ಲದೇ ಇತರ ಸುಮಾರು ಒಂದು ಡಜನ್‌ಗೂ ಹೆಚ್ಚು ಔಷಧಗಳನ್ನು ಕರೊನಾ ರೋಗಿಗಳ ಚಿಕಿತ್ಸೆಗೆ ಬಳಸುವುದಕ್ಕೂ ಐಸಿಎಂಆರ್ ಪರಿಶೀಲಿಸುತ್ತಿದೆ.
ಇದರಲ್ಲಿ ಎಬೊಲಾ ರೋಗಕ್ಕೆ ಕಂಡು ಹಿಡಿಯಲಾಗಿದ್ದ ರೆಮ್ಡಿಸಿವಿರ್ ಔಷಧ, ಡಿಸ್ಲುರ್ಮ್, ರಿಸ್ವೆರ್ಟಾಲ್ ಸೇರಿದಂತೆ ಇನ್ನೂ ಅನೇಕ ಔಷಧಗಳಿವೆ. ಕೆಲವು ಔಷಧಗಳು ಈಗಾಗಲೇ ಭಾರತದಲ್ಲಿ ಕ್ಲಿನಿಕಲ್ ಪರೀಕ್ಷೆಗೆ ಒಳಪಟ್ಟಿವೆ. ಆದರೆ, ಯಾವ ಔಷಧವೂ ಕರೊನಾ ರೋಗದ ವಿರುದ್ಧ ಇನ್ನೂ ಪರಿಣಾಮಕಾರಿ ಫಲಿತಾಂಶ ತೋರಿಸಿಲ್ಲ.
ಕರೊನಾಗೆ ಹೊಸ ಔಷಧ ಕಂಡು ಹಿಡಿಯಲು ಇನ್ನೂ ಸಾಕಷ್ಟು ಸಮಯ ತಗುಲುತ್ತದೆ. ಈ ಹಿನ್ನೆಲೆಯಲ್ಲಿ ಔಷಧಗಳ ಬಳಕೆಯ ಉದ್ದೇಶವನ್ನು ಮರುನಿಗದಿಪಡಿಸುವುದು (ರಿಪರ್ಪಸಿಂಗ್) ಸುಲಭ ವಿಧಾನ. ಈ ನಿಟ್ಟಿನಲ್ಲಿ ಯಾವ ಔಷಧಗಳ ಸಮ್ಮಿಶ್ರಣದಿಂದ ಕರೊನಾ ರೋಗಕ್ಕೆ ಚಿಕಿತ್ಸೆ ನೀಡಬಹುದು ಎಂಬ ಬಗ್ಗೆ ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿವೆ ಎಂದು ಭೋಪಾಲ್‌ನ ಏಮ್ಸ್ ನಿರ್ದೇಶಕ ಡಾ. ಸರಮಣ್ ಸಿಂಗ್ ಹೇಳಿದ್ದಾರೆ.