VIDEO| ಸಚಿನ್​ ಬದಲು ಸೂಚಿನ್​ ಎಂದು ಟ್ರಂಪ್ ಉಚ್ಛರಿಸಿದ ಬೆನ್ನಲ್ಲೇ ಕ್ರಿಕೆಟ್​ ದಿಗ್ಗಜನ ಹೆಸರು ಬದಲಿಸಿದ ಐಸಿಸಿ!

Soochin Trump
Published on

ಅಹಮದಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್​ ತಮ್ಮ ಕುಟುಂಬ ಸಮೇತ ಎರಡು ದಿನಗಳ ಭಾರತ ಪ್ರವಾಸಕ್ಕೆಂದು ಇಂದು ಆಗಮಿಸಿದ್ದಾರೆ. ಇಂದು ಬೆಳಗ್ಗೆ ಅಹಮದಾಬಾದ್​ನ ವಿಶ್ವದ ಬಹುದೊಡ್ಡ ಕ್ರಿಕೆಟ್​ ಕ್ರೀಡಾಂಗಣ ಮೊಟೆರಾ ಸ್ಟೇಡಿಯಂನಲ್ಲಿ ನಡೆದ "ನಮಸ್ತೆ ಟ್ರಂಪ್​" ಕಾರ್ಯಕ್ರಮವನ್ನು ಉದ್ದೇಶಿಸಿ ಟ್ರಂಪ್​ ಮಾತನಾಡಿದರು. ಭಾಷಣದ ವೇಳೆ ಟ್ರಂಪ್​ ಆಡಿದ ಮಾತೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಒಳಗಾಗಿದೆ.

ಇಂದು ಬೆಳಗ್ಗೆ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತ ಬಂದಿಳಿದ ಟ್ರಂಪ್​ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಟ್ರಂಪ್​ ಜತೆಯಲ್ಲಿ ಅಮೆರಿಕ ನಿಯೋಗವು ಆಗಮಿಸಿತ್ತು. ಬಳಿಕ ಅದ್ಧೂರಿ ರೋಡ್​ ಶೋ ಮೂಲಕ ಗಾಂಧಿಯ ಸಬರಮತಿ ಆಶ್ರಮಕ್ಕೆ ತೆರಳಿ, ಅಲ್ಲಿಂದ ಮೊಟೆರಾ ಕ್ರೀಡಾಂಗಣಕ್ಕೆ ಆಗಮಿಸಿದರು.

ಭಾಷಣ ಆರಂಭಿಸಿದ ಟ್ರಂಪ್ ಮೊದಲಿಗೆ ಭಾರತೀಯರಿಗೆ ಧನ್ಯವಾದ ಹೇಳಿದರು. ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ಹಾಗೂ ಭಾರತವನ್ನು ಕೊಂಡಾಡಿದರು. ಬಾಲಿವುಡ್​ ಸಿನಿಮಾಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​​ ಹಾಗೂ ಟೀಮ್​ ಇಂಡಿಯಾ ಯಶಸ್ವಿ ನಾಯಕ ವಿರಾಟ್​ ಕೊಹ್ಲಿಯನ್ನು ವಿಶ್ವಶ್ರೇಷ್ಠ ಆಟಗಾರರು ಎಂದು ಬಣ್ಣಿಸಿದರು.

ಆದರೂ, ಸಚಿನ್​ ಹೆಸರು ಉಲ್ಲೇಖಿಸಿದ ಟ್ರಂಪ್​ ಕುರಿತು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅದಕ್ಕೆ ಕಾರಣ ಸಚಿನ್​ ಹೆಸರು ಉಚ್ಛರಿಸಿದ ರೀತಿ. ಸಚಿನ್​ ಎಂದು ಕರೆಯುವ ಬದಲು ಸೂಚಿನ್​ ಎಂದು ಉಚ್ಛರಿಸಿದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಗೆಬುಗ್ಗೆಯನ್ನು ಹರಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಕೂಡ ತನ್ನ ಟ್ವಿಟರ್​ನಲ್ಲಿ ವಿನೂತನವಾಗಿ ಟ್ವೀಟ್​ ಮಾಡಿದೆ.

ಸ್ಯಾಚ್​, ಸಚ್​, ಸುಚ್​ ಮತ್ತು ಸೂಚ್ ಎಂದು ಬರೆದು ಯಾರಿಗಾದರೂ ತಿಳಿದಿದೆಯೇ ಎಂದು ಐಸಿಸಿ ಪ್ರಶ್ನಿಸಿದೆ.​ ಅಲ್ಲದೆ, ವಿಡಿಯೋದಲ್ಲಿ ಸಚಿನ್​ ಅವರ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಸಚಿನ್​​ ಹೆಸರನ್ನು ಡಿಲೀಟ್​ ಮಾಡಿ ಸೂ ಚಿನ್​ ಎಂದು ಬರೆದು ಸೇವ್​ ಮಾಡುವ ರೀತಿ ನಗೆಚಟಾಕಿ ಹಾರಿಸಿದೆ. ಈ ವಿಡಿಯೋ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆಲವೇ ಕ್ಷಣಗಳಲ್ಲಿ 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರು ಕೂಡ ಟ್ರೋಲ್​ ಮೂಲಕ ಹಾಸ್ಯವನ್ನು ಬೆರೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net