ಹಳೇ ವೈಮನಸ್ಯ ಮರೆತು ಜೆಡಿಎಸ್​ನತ್ತ ಹೊರಟುನಿಂತ ಇಬ್ರಾಹಿಂ ಮನವೊಲಿಕೆಗೆ ಡಿಕೆಶಿ ಯತ್ನ

ibrahim- dks
Published on

ಬೆಂಗಳೂರು: ಹಳೇ ವೈಮನಸ್ಯ ಮರೆತು ಜೆಡಿಎಸ್​ನತ್ತ ಹೊರಟುನಿಂತ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರನ್ನು ತಡೆದು ನಿಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವತಃ ಮುಂದಾಗಿದ್ದಾರೆ.

ಭಾನುವಾರ ಬೆನ್ಸನ್ ಟೌನ್​ನಲ್ಲಿರುವ ಇಬ್ರಾಹಿಂ ನಿವಾಸಕ್ಕೆ ಆಗಮಿಸಿದ್ದ ಡಿಕೆಶಿ, ಸುದೀರ್ಘ ಚರ್ಚೆ ನಡೆಸಿದರಲ್ಲದೆ ಜಿಡಿಎಸ್​ಗೆ ಭವಿಷ್ಯವಿಲ್ಲ, ಹೀಗಾಗಿ ಆ ಪಕ್ಷದ ನಾಯಕರು ನೀಡುವ ಆಮಿಷಕ್ಕೆ ಮರುಳಾಗಿ ಆತುರದ ನಿರ್ಧಾರ ಕೈಗೊಳ್ಳದೆ ಕಾಂಗ್ರೆಸ್​ನಲ್ಲೇ ಮುಂದುವರಿಯುವಂತೆ ಕೋರಿಕೊಂಡರೆಂದು ತಿಳಿದುಬಂದಿದೆ.

ಈ ಹಿಂದೆ ಜೆಡಿಎಸ್​ನಲ್ಲಿದ್ದ ಇಬ್ರಾಹಿಂ ಸಿದ್ದರಾಮಯ್ಯರನ್ನ ಬೆಂಬಲಿಸಿ ಕಾಂಗ್ರೆಸ್ ಸೇರಿದ್ದರು, 2018ರ ಚುನಾವಣೆಯಲ್ಲೂ ಅವರ ಪರವಾಗಿ ರಾಜ್ಯ ಸುತ್ತಿದ್ದರು. ವಿಧಾನಪರಿಷತ್ ಪ್ರತಿಪಕ್ಷ ಸ್ಥಾನದ ಆಯ್ಕೆ ಸಂದರ್ಭ ಸಿದ್ದರಾಮಯ್ಯ ತಮ್ಮ ಪರ ನಿಲ್ಲಲಿಲ್ಲ ಎಂದು ಮುನಿಸಿಕೊಂಡು ಕಾಂಗ್ರೆಸ್ ಸಂಬಂಧವನ್ನೇ ಕಡಿದುಕೊಳ್ಳಲು ನಿರ್ಧರಿಸಿದ್ದರೆನ್ನಲಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಬ್ರಾಹಿಂ ಭೇಟಿ ಮಾಡಿ ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net