

ಗುಜರಾತ್: ಕಳೆದ 9 ತಿಂಗಳ ಹಿಂದೆ ಗ್ಯಾಂಗ್ ಲೀಡರ್ ಜತೆ ಪರಾರಿಯಾಗಿದ್ದ ಐಎಎಸ್ ಅಧಿಕಾರಿಯ ಪತ್ನಿ ಶನಿವಾರ (ಜು.20) ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುಜರಾತ್ನ ಗಾಂಧಿನಗರದಲ್ಲಿ ವರದಿಯಾಗಿದೆ. ವಿಷ ಕುಡಿದು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆ ಕಡೆಗೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿ ರಂಜೀತ್ ಕುಮಾರ್ ಅವರ ಪತ್ನಿ ಸೂರ್ಯ ಜಯ್(45) ಸಾವಿಗೀಡಾದ ಮಹಿಳೆ.
ಐಎಎಸ್ ಅಧಿಕಾರಿ ರಂಜೀತ್ ಕುಮಾರ್ ಅವರ ಗಾಂಧಿನಗರದಲ್ಲಿರುವ ನಿವಾಸದಲ್ಲಿ ಸೂರ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಗುವನ್ನು ಅಪಹರಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಸೂರ್ಯ ತಮ್ಮ ಪತಿಯ ಮನೆಗೆ 9 ತಿಂಗಳ ಬಳಿಕ ಹಿಂತಿರುಗಿದಾಗ ಮನೆಯೊಳಗೆ ಪ್ರವೇಶಿಸಲು ಪತಿ ರಂಜಿತ್ ಅನುಮತಿ ನೀಡಿಲ್ಲ. ಇದರಿಂದ ತೀವ್ರ ಮನನೊಂದ ಮಹಿಳೆ, ಮನೆಯ ಬಾಗಿಲ ಮುಂದೆಯೇ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆಯ ವಿವರ: 9 ತಿಂಗಳ ಹಿಂದೆ ಗೆಳೆಯನಾದ ಗ್ಯಾಂಗ್ ಲೀಡರ್ 'ಹೈಕೋರ್ಟ್ ಮಹಾರಾಜ'ನ ಜತೆ ಸೂರ್ಯ ಪರಾರಿಯಾಗಿದ್ದಳು. ಇದರ ಬೆನ್ನಲ್ಲೇ ಮಧುರೈನ 14 ವರ್ಷದ ಬಾಲಕನ ಅಪಹರಣ ಪ್ರಕರಣದಲ್ಲಿ 'ಮಹಾರಾಜ', ಸೂರ್ಯ ಮತ್ತು ಅವರ ಸಹಚರ ಸೆಂಥಿಲ್‌ಕುಮಾರ್ ಆರೋಪಿಗಳಾಗಿದ್ದರು. ಮಹಿಳೆಯೊಂದಿಗಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟ ವಿವಾದದಿಂದಾಗಿ ಆರೋಪಿಗಳು ಆಕೆಯ ಮಗುವನ್ನು ಅಪಹರಿಸಿದ್ದರು. 2 ಕೋಟಿ ರೂ. ಬೇಡಿಕೆಯಿಟ್ಟಿದ್ದ ಆರೋಪಿಗಳಿಂದ 14 ವರ್ಷದ ಬಾಲಕನನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ ಮಧುರೈ ಪೊಲೀಸರು, ಆರೋಪಿಗಳ ವಿರುದ್ಧ ತನಿಖೆ ಕೈಗೊಂಡಿದ್ದರು.
ಇದನ್ನೂ ಓದಿ: ಸಮಾಜಮುಖಿ ಕಾರ್ಯದಿಂದ ಅನಿಷ್ಟ ಪದ್ಧತಿ ಹೋಗಲಾಡಿಸಿ
ಇದಾದ ಬಳಿಕ ಮೂವರು ಆರೋಪಿಗಳು ತಮಿಳುನಾಡಿನಿಂದ ಪರಾರಿಯಾಗಿದ್ದರು. ಈ ಕೇಸ್ ಬೆನ್ನತ್ತಿದ್ದ ಪೊಲೀಸರಿಂದ ಬಂಧನ ಭೀತಿ ಎದುರಾದ ಹಿನ್ನೆಲೆ ಶನಿವಾರ ಸೂರ್ಯ ಪತಿ ರಂಜಿತ್ ಮನೆಗೆ ಬಂದಿದ್ದಳು. ಆದರೆ ಯಾವುದೇ ಕಾರಣಕ್ಕೂ ಆಕೆಯನ್ನು ಮನೆಯೊಳಗೆ ಪ್ರವೇಶಿಸಲು ಬಿಡಬೇಡಿ ಎಂದು ರಂಜೀತ್ ಕುಮಾರ್ ಮನೆಗೆಲಸಗಾರರಿಗೆ ಖಡಕ್ ಸೂಚನೆ ನೀಡಿದ್ದರು. ಇದರಿಂದ ಮನನೊಂದ ಅಧಿಕಾರಿಯ ಪತ್ನಿ, ಮನೆಯ ಬಾಗಿಲಲ್ಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).