

ನವದೆಹಲಿ: ದೇಶಾದ್ಯಂತ ಕರೊನಾ ಎರಡನೇ ಅಲೆ ಅಟ್ಟಹಾಸ ಮರೆಯುತ್ತಿದ್ದು, ಆಕ್ಸಿಜನ್ ಕೊರತೆಯಿಂದ ಉಸಿರಾಟದಲ್ಲಿ ತೊಂದರೆಯಾಗಿ ಅನೇಕರು ಸಾವಿಗೀಡಾಗುತ್ತಿರುವಂತಹ ಕಷ್ಟದ ಸಮಯದಲ್ಲಿ ಭಾರತೀಯ ವಾಯುಪಡೆ ಸೇವೆಗೆ ಮುಂದಾಗಿದ್ದು, ಆಕ್ಸಿಜನ್ ಸಂಜೀವಿನಿಯನ್ನು ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ.
ಪ್ರಯಾಣ ಸಮಯವನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸಲು ಭಾರತೀಯ ವಾಯುಪಡೆ ಸೇವೆಗೆ ಇಳಿದಿದೆ. ಸಿ-17 ಮತ್ತು ಐಎಲ್-76 ವಾಯುಪಡೆ ವಿಮಾನಗಳು ಬಹುದೊಡ್ಡ ಆಮ್ಲಜನಕ ಟ್ಯಾಂಕರ್ಗಳನ್ನು ಭರ್ತಿ ಕೇಂದ್ರಗಳಿಂದ ಏರ್ಲಿಫ್ಟ್ ಮಾಡಿ, ಹೆಚ್ಚು ಅಗತ್ಯವಿರುವ ಆಮ್ಲಜನಕದ ವಿತರಣೆಯನ್ನು ವೇಗಗೊಳಿಸಲು ನೆರವಾಗಿದೆ.
ವಾಯುಪಡೆ ನಿಲ್ದಾಣ ಹಿಂಡಾನ್ನಿಂದ ಆಕ್ಸಿಜನ್ ಕಂಟೈನರ್ ಹೊತ್ತು ಅಗತ್ಯವಿರುವ ದೇಶದ ವಿವಿಧ ಭಾಗಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಇಷ್ಟೇ ಅಲ್ಲದೆ, ಅಗತ್ಯ ಔಷಧಗಳನ್ನು ವಿವಿಧ ಭಾಗಗಳಿಗೆ ತಲುಪಿಸುವ ಕಾರ್ಯವು ನಡೆಯುತ್ತಿದೆ. ಇಂತಹ ಕಠಿಣ ಸಮಯದಲ್ಲಿ ವಾಯುಪಡೆ ಜನರ ಜೀವ ರಕ್ಷಣೆಗೆ ಮುಂದಾಗುವ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. (ಏಜೆನ್ಸೀಸ್)