ಮೋದಿಗೆ ಕೈರುಚಿ ಬಡಿಸೋದು ಮಿಸ್​ ಆಯ್ತಲ್ಲಾ ಎಂದು ಪರಿತಪಿಸಿದ ಪ್ರಧಾನಿ

Scot Morisson
Published on

ನವದೆಹಲಿ: ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾದ ಹಲವೆಡೆ ಭಾರಿ ಕಾಡ್ಚಿಚ್ಚು ವ್ಯಾಪಿಸಿತ್ತು. ಈ ಕಾರಣದಿಂದಾಗಿಯೇ ಅಲ್ಲಿನ ಪ್ರಧಾನಮಂತ್ರಿ ಸ್ಕಾಟ್​ ಮಾರಿಸಸ್​ ಭಾರತ ಭೇಟಿ ರದ್ದಾಗಿತ್ತು.

ಪ್ರಸ್ತುತ, ಜೂನ್ 4ರಂದು ಭಾರತ- ಆಸ್ಟ್ರೇಲಿಯಾ ಪ್ರಧಾನಿಗಳ ನಡುವೆ ಸಭೆ ನಿಗದಿಯಾಗಿದೆ. ಎರಡೂ ದೇಶಗಳ ಆರ್ಥಿಕ ಹಾಗೂ ಇತರ ವಲಯಗಳ ನಡುವಿನ ಸಂಬಂಧವನ್ನು ವೃದ್ಧಿಸಲು ಪ್ರಧಾನಿ ಮೋದಿ ಜತೆಗೆ ಸ್ಕಾಟ್​ ಮಾರಿಸನ್​ ಮಾತುಕತೆ ನಡೆಸಲಿದ್ದಾರೆ.

ಕರೊನಾ ಕಾರಣದಿಂದಾಗಿ ಈ ಸಭೆ ವಿಡಿಯೋ ಕಾನ್ಫರೆನ್ಸ್​ ಆಗಿರಲಿದೆ. '....ಅಯ್ಯೋ ಭೇಟಿ ಸಾಧ್ಯವಾಗಿದ್ದರೆ, ಮೋದಿಯೊಂದಿಗೆ ಖಂಡಿತ ಹಂಚಿಕೊಳ್ಳುತ್ತಿದೆ ಎಂದು ಸ್ಕಾಟ್​ ಮಾರಿಸನ್​ ಪರಿತಪಿಸಿದ್ದಾರೆ. ಇಷ್ಟಕ್ಕೂ ಮಾರಿಸನ್​ ಮೋದಿಗೆ ಕೊಡಬೇಕು ಎಂದಿದ್ದಾದರೂ ಏನು?

ಭಾನುವಾರ ಸ್ಕಾಟ್​ ಮಾರಿಸನ್​ ಭಾರತೀಯ ಖಾದ್ಯ ಸಮೋಸಾ ತಯಾರಿಸಿದ್ದಾರೆ. ಜತೆಗೆ, ಮಾವಿನಕಾಯಿ ಚಟ್ನಿ ಕೂಡ ಮಾಡಿದ್ದಾರೆ. ಇದರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ತಾವೇ ತಯಾರಿಸಿದ ಖಾದ್ಯಕ್ಕೆ ಸ್ಕೊಮಾಸಾ ಎಂದು ನಾಮಕರಣ ಮಾಡಿದ್ದಾರೆ.

'ಸ್ಕೊಮೊಸಾ... ಮಾವಿನ ಕಾಯಿ ಚಟ್ನಿಯೊಂದಿಗೆ... ಅದೂ ಕೂಡ ತಿರುಳಿನಿಂದ ತಯಾರಿಸಿದ್ದು, ದುರಾದೃಷ್ಟವೆಂದರೆ ಈ ವಾರ ನರೇಂದ್ರ ಮೋದಿ ಅವರೊಂದಿಗೆ ನನ್ನ ಮೀಟಿಂಗ್​ ವಿಡಿಯೋ ಲಿಂಕ್​ ಮೂಲಕ ನಡೆಯಲಿದೆ. ಅವರು ಸಸ್ಯಾಹಾರಿ. ಅವರೊಂದಿಗೆ ಇವನ್ನು ಹಂಚಿಕೊಳ್ಳಲು ಖಂಡಿತ ಇಷ್ಟಪಡುತ್ತಿದ್ದೆ.' ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಮೋದಿಗೆ ಖಾತೆಗೂ ಟ್ಯಾಗ್​ ಮಾಡಿದ್ದಾರೆ.

ಕೋವಿಡ್​ ಕಾಲದಲ್ಲಿ ಭಾರತದ ಮೊದಲ ದ್ವಿಪಕ್ಷೀಯ ಮಾತುಕತೆಗಳು ಇದೇ ಪ್ರಥಮ ಬಾರಿಗೆ  ವಿಡಿಯೋ ಸಂವಾದದ ಮೂಲಕ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net