5 ವರ್ಷ ನಾನೇ ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ

6-67d1cc1511dd7
Published on

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೇಳಿಕೆ | ಅಧಿಕಾರ ಹಸ್ತಾಂತರ ಚರ್ಚೆ ಮತ್ತೆ ಮುನ್ನೆಲೆಗೆ

ಬೆಂಗಳೂರು: ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಬುಧವಾರ ವಿಧಾನಸಭೆಯಲ್ಲಿ ಆತ್ಮವಿಶ್ವಾಸದಿಂದ ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸ್ವಪಕ್ಷೀಯರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪಕ್ಷದ ನಾಯಕತ್ವ ಕುರಿತು ಕಾಂಗ್ರೆಸ್​ನೊಳಗೆ ತಿಕ್ಕಾಟ, ಹೊಗೆಯಾಡುತ್ತಿರುವ ಚರ್ಚೆಯ ಬೆಂಕಿಗೆ ಸಿದ್ದರಾಮಯ್ಯ ನೀಡಿರುವ ಈ ಹೇಳಿಕೆ ತುಪ್ಪ ಸುರಿದಂತಾಗಿದೆ.

ಈ ಮಾತುಗಳು ಸಿದ್ದರಾಮಯ್ಯ ಆಪ್ತರಿಗೆ ಖುಷಿ ಕೊಟ್ಟಿದ್ದರೆ, ಕೈ ಪಕ್ಷದಲ್ಲಿ ನಡೆಯಬಹುದಾದ ಬೆಳವಣಿಗೆಗಳು ಕುತೂಹಲ ಹೆಚ್ಚಿಸಿವೆ. ವಿಧಾನ ಸಭೆಯಲ್ಲಿ ಆಡಿದ ಮಾತನ್ನು ಸಿದ್ದರಾಮಯ್ಯ ಪ್ರಾಸಂಗಿಕವಾಗಿ ಹೇಳಿದ್ದಲ್ಲ. ಅತ್ಯಂತ ದೃಢ ಸ್ವರದಲ್ಲಿ ನಾನೇ ಸಿಎಂ ಎನ್ನುವ ಮೂಲಕ ಪ್ರತಿಪಕ್ಷಕ್ಕಿಂತ ಸ್ವಪಕ್ಷೀಯರಿಗೆ ಒಳೇಟು ನೀಡಿದ್ದಾರೆ ಎನ್ನುವುದು ಆಡಳಿತಪಕ್ಷದ ಮೊಗಸಾಲೆಯಲ್ಲಿ ಪ್ರತಿಧ್ವನಿಸಿದ ಆಪ್ತ ಸಮಾಲೋಚನೆಯ ತಿರುಳಾಗಿತ್ತು.

ಸಿದ್ದರಾಮಯ್ಯ ಹಾಗೆಂದಿದ್ದೇಕೆ?: ಗ್ಯಾರಂಟಿ ಅನುಷ್ಠಾನ ಸಮಿತಿಗಳ ಕುರಿತು ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅಧಿಕಾರ ಯಾರಿಗೂ ಶಾಶ್ವತವಲ್ಲ, ರಾಜಕೀಯವಾಗಿ ಕೆಟ್ಟ ಪರಂಪರೆಗೆ ನಾಂದಿ ಹಾಡುವುದು ಬೇಡ ಎಂದರು. ಈ ವೇಳೆ ಪ್ರತಿಕ್ರಿಯಿಸಿದ ಸಿಎಂ ನಾವು ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಏನಾಯಿತು ಎಂದು ಗೊತ್ತಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಧಮ್ಮು, ತಾಕತ್ತು ಎಂದಿದ್ದು ಎಲ್ಲಿಗೆ ಹೋಯಿತು ? ಎಂದು ಕೆಣಕಿದರು. ಹೌದೌದು, 2018ರ ಚುನಾವಣೆಯಲ್ಲಿ ಹೀಗೆ ಹೇಳಿದವರು ನಂತರ ಮಾಯವಾಗಿಬಿಟ್ಟರು ಎಂದು ಆರ್.ಅಶೋಕ್ ಪಟ್ಟು ಬಿಡದೆ ತಿವಿದರು.

ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷದ ಅವಧಿ ಪೂರೈಕೆ ಮಾಡುವುದೇ ಪುಣ್ಯವೆಂದು ಮತ್ತೆ ಕಾಲೆಳೆದರು. ‘ಅದೆಲ್ಲ ಏನಿಲ್ಲ, ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ. ಮುಂದಿನ ಬಾರಿಯೂ ನಮ್ಮ ಪಕ್ಷವೇ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಸಿದ್ದರಾಮಯ್ಯ ಗಟ್ಟಿ ಧ್ವನಿಯಲ್ಲಿ ಹೇಳಿದಾಗ ಆಡಳಿತ ಪಕ್ಷದ ಸಾಲಿನಲ್ಲಿ ಹರ್ಷ, ಬೆಂಬಲದ ಧ್ವನಿ ಮೊಳಗಿತು.

ಸಚಿವ ಸಂಪುಟ ಪುನಾರಚನೆ ವೈರುಧ್ಯ

ಸಂಪುಟ ಪುನಾರಚನೆ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ಎರಡು ಅಭಿಪ್ರಾಯ ಕೇಳಿಬರುತ್ತಿದೆ. ಸಂಪುಟ ಪುನಾರಚನೆಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ 7-8 ಸಚಿವರನ್ನು ಕೈಬಿಟ್ಟು ಇತರರಿಗೆ ಏಕೆ ಅವಕಾಶಕೊಡಬಾರದೆಂಬ ಅಭಿಪ್ರಾಯ ಹೈಕಮಾಂಡ್​ನದ್ದು. 2024ರ ಜುಲೈನಲ್ಲೇ ಇಂಥದ್ದೊಂದು ಪ್ರಸ್ತಾಪವನ್ನು ರಾಜ್ಯ ನಾಯಕರ ಮುಂದಿಟ್ಟಿತ್ತು.

ಈಗಲೂ ಆ ಚರ್ಚೆ ಮುಂದುವರಿದೇ ಇದೆ. ಇದೀಗ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಸಂಪುಟ ಪುನಾರಚನೆ ಆಗಲಿದೆ ಎಂಬ ಮಾತುಗಳು ವಿಧಾನಸಭೆ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ. ಇದೇ ವೇಳೆ ಪವರ್ ಶೇರಿಂಗ್ ವಿಷಯ ಸ್ಪಷ್ಟವಾಗುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ ಎಂಬ ಸ್ಪಷ್ಟ ಅಭಿಪ್ರಾಯ ಡಿಸಿಎಂ ಪಾಳಯದಿಂದ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net