3ನೇ ಪಕ್ಷ ಪ್ರಾರಂಭಿಸುವುದು... ಎಲಾನ್​ ಮಸ್ಕ್​ ಸ್ಥಾಪಿಸಿದ ಹೊಸ ಪಕ್ಷದ ಬಗ್ಗೆ ಟ್ರಂಪ್​ ಹೇಳಿಕೆ ವೈರಲ್​! Donald Trump

Donald Trump
Published on

Donald Trump : ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿರುವ ತಮ್ಮ ಮಾಜಿ ಮಿತ್ರ ಹಾಗೂ ವಿಶ್ವದ ನಂಬರ್​ 1 ಉದ್ಯಮಿ ಎಲಾನ್​ ಮಸ್ಕ್​ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಪಾರ್ಟಿ ಹೆಸರಿನಲ್ಲಿ ಮಸ್ಕ್​ ರಚನೆ ಮಾಡಿರುವ ಹೊಸ ಪಕ್ಷವನ್ನು ಹಾಸ್ಯಾಸ್ಪದ ಎಂದು ಟ್ರಂಪ್​ ಮೂದಲಿಸಿದ್ದಾರೆ. ಒಂದು ಕಾಲದಲ್ಲಿ ರಿಪಬ್ಲಿಕನ್ ಪಕ್ಷದ ಅತಿದೊಡ್ಡ ಬೆಂಬಲಿಗರಾಗಿದ್ದ ಮಸ್ಕ್​ ಜತೆಗಿನ ಟ್ರಂಪ್​ ದ್ವೇಷ ಇದೀಗ ಇನ್ನಷ್ಟು ಹೆಚ್ಚಾಗಿದೆ.

ಅಮೆರಿಕದ ಪ್ರಸ್ತುತ ರಾಜಕೀಯ ವ್ಯವಸ್ಥೆಗೆ ಸವಾಲು ಹಾಕಲು ಬಯಸಿರುವುದಾಗಿ ಮಸ್ಕ್ ಹೇಳಿದ ಬೆನ್ನಲ್ಲೇ ಡೊನಾಲ್ಡ್​ ಟ್ರಂಪ್, ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಉದ್ಯಮಿಯನ್ನು ಹಳಿ ತಪ್ಪಿದ ರೈಲು ಅವಶೇಷ ಎಂದು ಜರಿದಿದ್ದಾರೆ. ಮೂರನೇ ಪಕ್ಷವನ್ನು ಪ್ರಾರಂಭಿಸುವುದು ಹಾಸ್ಯಾಸ್ಪದ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ತಮ್ಮ ನ್ಯೂಜೆರ್ಸಿ ಗಾಲ್ಫ್ ಕ್ಲಬ್‌ನಿಂದ ವಾಷಿಂಗ್ಟನ್‌ಗೆ ಹಿಂತಿರುಗುವಾಗ ಏರ್ ಫೋರ್ಸ್ ಒನ್ ಹತ್ತುವ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕ ಯಾವಾಗಲೂ ಎರಡು ಪಕ್ಷಗಳ ವ್ಯವಸ್ಥೆಯಾಗಿದೆ ಮತ್ತು ಮೂರನೇ ಪಕ್ಷವನ್ನು ಪ್ರಾರಂಭಿಸುವುದು ಗೊಂದಲವನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮೂರನೇ ಪಕ್ಷಗಳು ಎಂದಿಗೂ ಕೆಲಸ ಮಾಡಿಲ್ಲ. ಆದ್ದರಿಂದ ಆತ (ಎಲಾನ್​​ ಮಸ್ಕ್​) ಅದರೊಂದಿಗೆ ಖುಷಿಪಟ್ಟುಕೊಳ್ಳಬಹುದು. ಆದರೆ, ಮೂರನೇ ಪಕ್ಷ ಹಾಸ್ಯಾಸ್ಪದ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್​ ಹೇಳಿದರು.

ಅಂದಹಾಗೆ ಮಸ್ಕ್ ಅವರು ಟ್ರಂಪ್​​ ಆಡಳಿತ ಮತ್ತು ಈಗ ಜಾರಿಯಲ್ಲಿರದ ಅಥವಾ ಕಾರ್ಯನಿರ್ವಹಿಸದ ಸರ್ಕಾರಿ ದಕ್ಷತೆ ಇಲಾಖೆ (DOGE) ಎರಡರಿಂದಲೂ ನಿರ್ಗಮಿಸಿದ್ದಾರೆ. ಸರ್ಕಾರದ ವೆಚ್ಚವನ್ನು ಕಡಿತಗೊಳಿಸಲು ಮತ್ತು ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲು ಟ್ರಂಪ್​ ಈ ಇಲಾಖೆಯನ್ನು ರಚನೆ ಮಾಡಿದ್ದರು. ಇದರ ಮುಖ್ಯಸ್ಥರನ್ನಾಗಿ ಎಲಾನ್​ ಮಸ್ಕ್​ ಅವರನ್ನು ನೇಮಿಸಲಾಗಿತ್ತು. ಈ ಇಲಾಖೆ ತೆಗೆದುಕೊಂಡು ಸಾಕಷ್ಟು ಕ್ರಮಗಳು ವಿವಾದಕ್ಕೂ ಗುರಿಯಾಯಿತು. ಇನ್ನು ಟ್ರಂಪ್​ ಅವರ ತೆರಿಗೆ ನೀತಿಗಳನ್ನು ಮಸ್ಕ್​ ಟೀಕಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿದ್ದು, ಪರಸ್ಪರ ವಾಗ್ದಾಳಿಯಲ್ಲಿ ತೊಡಗಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಮಸ್ಕ್, ಅಮೆರಿಕದ "ಏಕಪಕ್ಷ ವ್ಯವಸ್ಥೆ"ಗೆ ಸವಾಲು ಹಾಕಲು "ಅಮೆರಿಕ ಪಾರ್ಟಿ" ಎಂದು ಕರೆಯಲ್ಪಡುವ ಹೊಸ ಪಕ್ಷವನ್ನು ರಚಿಸುವುದಾಗಿ ಶನಿವಾರ ಘೋಷಿಸಿದರು. ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಲ್ಲ, ಏಕಪಕ್ಷೀಯ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಮಸ್ಕ್ ತಮ್ಮ ಪ್ರಕಟಣೆಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು. ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ, ಮಸ್ಕ್ ಅವರು “ಏಕಪಕ್ಷ” ವ್ಯವಸ್ಥೆ ಎಂದು ಕರೆಯುವ ಅಮೆರಿಕದ ರಾಜಕೀಯ ವ್ಯವಸ್ಥೆಗೆ ಹೇಗೆ ಸವಾಲು ಹಾಕಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡರು.

ನಾವು ಏಕಪಕ್ಷ ವ್ಯವಸ್ಥೆಯನ್ನು ಭೇದಿಸಲು ಹೊರಟಿರುವ ಮಾರ್ಗವೆಂದರೆ, ಲ್ಯೂಕ್ರಾದಲ್ಲಿ ಸ್ಪಾರ್ಟನ್ನರ ಅಜೇಯತೆಯ ಪುರಾಣವನ್ನು ಎಪಾಮಿನೊಂಡಾಸ್ ಹೇಗೆ ಛಿದ್ರಗೊಳಿಸಿದರು ಎಂಬುದರ ಒಂದು ರೂಪಾಂತರವನ್ನು ಬಳಸುವುದಾಗಿದೆ ಅಂದರೆ, ಯುದ್ಧಭೂಮಿಯಲ್ಲಿ ನಿಖರವಾದ ಸ್ಥಳದಲ್ಲಿ ಅತ್ಯಂತ ಕೇಂದ್ರೀಕೃತ ಬಲ ಎಂದು ಮಸ್ಕ್​ ವಿವರಿಸಿದರು.

ಇದಕ್ಕೂ ಮುನ್ನ ಜುಲೈ 4 ರಂದು ಯುಎಸ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಮಸ್ಕ್ ತಮ್ಮ ಎಕ್ಸ್​ ಖಾತೆಯಲ್ಲಿ ಒಂದು ಸಮೀಕ್ಷೆಯನ್ನು ಪೋಸ್ಟ್ ಮಾಡಿ, ನೀವು ಎರಡು-ಪಕ್ಷ (ಕೆಲವರು ಏಕಪಕ್ಷೀಯ ಎಂದು ಹೇಳುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಬಯಸುತ್ತೀರಾ ಎಂದು ಕೇಳಲು ಸ್ವಾತಂತ್ರ್ಯ ದಿನವು ಸೂಕ್ತ ಸಮಯ! ನಾವು ಅಮೆರಿಕ ಪಕ್ಷವನ್ನು ರಚಿಸಬೇಕೇ? ಎಂದು ಫಾಲೋವರ್ಸ್​ ಅನ್ನು ಕೇಳಿದ್ದರು. ಇದಕ್ಕೆ ಶೇ. 65.4 ರಷ್ಟು ಫಾಲೋವರ್ಸ್​ “ಹೌದು” ಎಂದು ಮತ ಚಲಾಯಿಸಿದರೆ, ಶೇ. 34.6 ರಷ್ಟು ಫಾಲೋವರ್ಸ್​ ಮಾತ್ರ “ಇಲ್ಲ” ಎಂದು ಮತ ಚಲಾಯಿಸಿದರು. ಈ ಬಲವಾದ ಬೆಂಬಲವನ್ನು ಪಕ್ಷ ರಚನೆ ನಿರ್ಧಾರ ಹಿಂದಿನ ಪ್ರೇರಕ ಶಕ್ತಿ ಎಂದು ಮಸ್ಕ್ ಉಲ್ಲೇಖಿಸಿದರು.

ಇತ್ತೀಚಿನ ವಾರಗಳಲ್ಲಿ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಟ್ರಂಪ್ ಅವರ “ಒನ್ ಬಿಗ್ ಬ್ಯೂಟಿಫುಲ್ ಬಿಲ್” ಎಂದು ಕರೆಯಲ್ಪಡುವ ಹೊಸ ಶಾಸನವು ಕಾಂಗ್ರೆಸ್​ನ ಎರಡೂ ಸದನಗಳನ್ನು ಅಂಗೀಕರಿಸಿ ಜುಲೈ 4 ರಂದು ಕಾನೂನಾಗಿ ಸಹಿ ಹಾಕಲ್ಪಟ್ಟಿತು. ಈ ಬಿಲ್​ ಅನ್ನು ಮಸ್ಕ್​ ಟೀಕಿಸಿದ್ದಾರೆ. ಈ ಹಿಂದೆ ಪ್ರಮುಖ ಸಲಹಾ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಿದ್ದ ಮತ್ತು ಸರ್ಕಾರಿ ದಕ್ಷತೆ ಇಲಾಖೆಯ ಮೂಲಕ ವೆಚ್ಚ ಕಡಿತ ಪ್ರಯತ್ನಗಳನ್ನು ಮುನ್ನಡೆಸಿದ್ದ ಮಸ್ಕ್, ಟ್ರಂಪ್ ಅವರ ತೆರಿಗೆ ಮತ್ತು ಖರ್ಚು ಮಸೂದೆಯು ಮುಂದಿನ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಸಾಲಕ್ಕೆ 3.3 ಟ್ರಿಲಿಯನ್ ಡಾಲರ್‌ಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net