

ಚೆನ್ನೈ: ಸನಾತನ ಧರ್ಮ ಡೆಂಘಿ-ಮಲೇರಿಯಾದಂತೆ, ಅದನ್ನು ತೊಲಗಿಸಬೇಕು ಎಂದು ಹೇಳುವ ಮೂಲಕ ವಿವಾದಕ್ಕೆ ಒಳಗಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಮತ್ತೆ ಮತ್ತೆ ಅದನ್ನೇ ಹೇಳುವೆ ಎನ್ನುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ, ಡಿಎಂಕೆ ನಾಯಕ, ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ ನಿನ್ನೆ ಈ ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಒಳಗಾಗಿತ್ತು. ದೇಶಾದ್ಯಂತ ಇದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕಾಂಗ್ರೆಸ್ ಮೈತ್ರಿ ಪಕ್ಷಗಳಲ್ಲಿ ಒಂದಾಗಿರುವ ಡಿಎಂಕೆ ಪಕ್ಷದ ಈ ನಾಯಕನ ಹೇಳಿಕೆ ವಿರುದ್ಧ ಕಾಂಗ್ರೆಸ್ನ ಕೆಲವು ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಾಗ್ಯೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಉದಯನಿಧಿ, ಇದೀಗ ಮತ್ತೆ ಮತ್ತೆ ಅದನ್ನೇ ಹೇಳುವೆ ಎಂದಿದ್ದಾರೆ.