ನಟಿ ರಮ್ಯಾರನ್ನು ನಾನು ವೈಯಕ್ತಿಕವಾಗಿ ತುಂಬ ಇಷ್ಟಪಡುತ್ತೇನೆ..ಆಕೆ ಮತ್ತೆ ನಟಿಸಲಿ; ಇನ್​ಸ್ಟಾಗ್ರಾಂನಲ್ಲಿ ನಟ ಜಗ್ಗೇಶ್ ಪೋಸ್ಟ್​

Ramya 19 Feb 20
Published on

ಬೆಂಗಳೂರು: ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಕ್ಕೆ ನಟಿ ರಮ್ಯಾ ಅವರಿಗೆ ಬೈದು ಟ್ವೀಟ್​ ಮಾಡಿದ್ದ ನವರಸ ನಾಯಕ ಜಗ್ಗೇಶ್​ ಈಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ರಮ್ಯಾರನ್ನು ಹೊಗಳಿ ಪೋಸ್ಟ್ ಹಾಕಿದ್ದಾರೆ.

ಪುನೀತ್ ರಾಜಕುಮಾರ್​ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ತುಂಬ ಹಿಂದೆ ನಟಿ ರಮ್ಯಾ ಪಾಲ್ಗೊಂಡಿದ್ದರು. ಅದರಲ್ಲಿ ರಮ್ಯಾ ಅವರು ಪುನೀತ್​ ರಾಜ್​ಕುಮಾರ್​ ಅವರ ಬಳಿ ಜಗ್ಗೇಶ್​ ಅವರ ಮಿಮಿಕ್ರಿ ಮಾಡಲು ಕೇಳುತ್ತಾರೆ. ಆಗ ಪುನೀತ್​ ಕೂಡ ಜಗ್ಗೇಶ್​ ಅವರ ಎರಡು ಡೈಲಾಗ್​ಗಳನ್ನು ಅನುಕರಣೆ ಮಾಡುತ್ತಾರೆ. ಅದೊಂದು ಫನ್ನಿಯಾದ, ಹಳೇ ವಿಡಿಯೋ. ಸಾಮಾಜಿಕ ಜಾಲತಾಣಗಳನ್ನೂ ತುಂಬ ವೈರಲ್​ ಆಗಿತ್ತು.

ಈಗ ಅದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡ ನಟ ಜಗ್ಗೇಶ್​ ಅವರು ರಮ್ಯಾರನ್ನು ಹೊಗಳಿದ್ದಾರೆ. ನಾನು ರಮ್ಯಾ ಅವರನ್ನು ವೈಯಕ್ತಿಕವಾಗಿ ತುಂಬ ಇಷ್ಟಪಡುತ್ತೇನೆ. ಆದರೆ ಕೆಲ ಸಿದ್ಧಾಂತಗಳಿಂದಾಗಿ ಮನಸು ಒಡೆದ ಹಾಲಾಯಿತು. ಈಕೆ ಒಳ್ಳೆಯ ನಟಿ. ಮತ್ತೆ ನಟಿಸಲಿ ಎಂದು ಹಾರೈಸುವೆ. ರಮ್ಯಾ ಅವರು ವಾಪಸ್​ ಬರಲಿ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ.

ಅಲ್ಲದೆ, ಕಲಾಬಂಧು ಪುನೀತ್​ ರಾಜ್​ಕುಮಾರ್ ಅವರು ನನ್ನನ್ನು ಇಮಿಟೇಟ್​ ಮಾಡಿದ್ದು ತುಂಬ ಖುಷಿಕೊಟ್ಟಿತು ಎಂದೂ ಜಗ್ಗೇಶ್​ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net