

ಬೆಂಗಳೂರು: ಯಾವ ರೀತಿ ರಾಜಕಾರಣ ಮಾಡಬೇಕು, ಎದುರಾಳಿ ಏನೇ ಚದುರಂಗ ಆಟವಾಡಿದರೂ ಹೇಗೆ ಚೆಕ್ ಮೇಟ್ ನೀಡಬೇಕು ಎಂದು ನನಗೆ ಗೊತ್ತಿದೆ. ರಾಜಕಾರಣ ಫುಟ್ಬಾಲ್ ಅಲ್ಲ. ಚದುರಂಗದಾಟ ನನಗೆ ಗೊತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೌಮ್ಯ ರೆಡ್ಡಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಳಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಿ. ಆಗ ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.
ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದನ್ನು ಬಳಸಿಕೊಂಡು ಈ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಕೊಡುಗೆಗಳನ್ನು ಮನದಟ್ಟು ಮಾಡಬೇಕು ಎಂದು ಇದೇ ವೇಳೆ ಕರೆ ನೀಡಿದರು.
100 ಕಚೇರಿಗೆ ಕಟ್ಟಡ
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮೋನೋತ್ಸವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 100 ಬ್ಲಾಕ್ ಮಟ್ಟದ ಕಾಂಗ್ರೆಸ್ ಕಚೇರಿ ನಿರ್ಮಿಸಲು ತೀರ್ಮಾನ ಮಾಡಿದ್ದೇವೆ. ಸಚಿವರು, ಶಾಸಕರಿಗೆ ಜವಾಬ್ದಾರಿ ವಹಿಸಿದ್ದೇನೆ. ಈ ಕಚೇರಿಗಳು ನಮ್ಮ ಪಾಲಿಗೆ ದೇವಾಲಯವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಾನು ಎಷ್ಟು ದಿನ ಕಾಂಗ್ರೆಸ್ ಅಧ್ಯಕ್ಷನಾಗಿ ಇರುತ್ತೇನೋ ಗೊತ್ತಿಲ್ಲ. ಆದರೆ ಅಧಿಕಾರದಲ್ಲಿ ಇರುವಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸಂಘಟನೆ ಇತಿಹಾಸದ ಪುಟಕ್ಕೆ ಹೋಗುತ್ತದೆ ಎಂದು ತಿಳಿಸಿದರು.
ಅವಕಾಶದ ಆರ್
ಮಹಿಳಾ ಕಾಂಗ್ರೆಸ್ ಅಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಯಾರು ಹೆಚ್ಚಿಗೆ ಸದಸ್ಯತ್ವ ಮಾಡುತ್ತಾರೋ ಅವರಿಗೆ ಸ್ಥಾನಮಾನ ನೀಡಲಾಗುವುದು. ರಾಜ್ಯ ಮಟ್ಟ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರ ನೀಡುತ್ತಿದ್ದೇವೆ. ಪ್ರತಿ ಮೂವರಲ್ಲಿ ಒಬ್ಬ ಮಹಿಳೆಗೆ ಅಧಿಕಾರ ನೀಡಲು ಸಿಎಂ ಹಾಗೂ ನಾನು ತೀರ್ಮಾನಿಸಿದ್ದೇವೆ. ಎಲ್ಲರಿಗೂ ಒಂದೇ ಬಾರಿ ನೀಡಲು ಸಾಧ್ಯವಾಗದಿದ್ದರೂ ಹಂತ ಹಂತವಾಗಿ ನೀಡುತ್ತೇವೆ ಎಂದರು.