

ನವದೆಹಲಿ: ಕೇಂದ್ರ ಬಜೆಟ್ ಇರಲಿ, ರಾಜ್ಯದ ಬಜೆಟ್ ಇರಲಿ ಜನಸಾಮಾನ್ಯರಿಗೆ ಒಂದು ಕುತೂಹಲ, ಅವರದ್ದೇ ಆದ ನಿರೀಕ್ಷೆಗಳು ಇದ್ದೇ ಇರುತ್ತವೆ. ಅದರಲ್ಲೂ ಕೇಂದ್ರ ಬಜೆಟ್ ಮಂಡನೆಯ ದಿನ ಹತ್ತಿರ ಬಂದರೆ ಇನ್ನೂ ಒಂದು ಪಟ್ಟು ಜಾಸ್ತಿಯೇ ಕುತೂಹಲ.
ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ಗೆ ಸಲಹೆ, ಸೂಚನೆಗಳನ್ನು ನೀಡುವ ಅವಕಾಶವನ್ನು ದೇಶದ ಪ್ರಜೆಗಳಿಗೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಸಲಹೆಗಳನ್ನು ಆಹ್ವಾನಿಸಿದ್ದಾರೆ. ದೇಶದ ನಾಗರಿಕರು ಹಾಗೂ ಕೇಂದ್ರ ಸರ್ಕಾರದ ಕೊಂಡಿಯಾಗಿರುವ ಮೈ ಗೌ (ನನ್ನ ಸರ್ಕಾರ) ವೆಬ್ ಪೋರ್ಟ್ಲ್ ಮೂಲಕ ಬಜೆಟ್ಗೆ ಸಂಬಂಧಿಸಿದ ಸಲಹೆಗಳನ್ನು ಯಾರು ಬೇಕಾದರೂ ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಬಜೆಟ್ ಈ ದೇಶದ 130 ಕೋಟಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಈ ದೇಶದ ಅಭಿವೃದ್ಧಿಯ ದಾರಿಯನ್ನು ರೂಪಿಸುತ್ತದೆ. ಹಾಗಾಗಿ ನೀವೆಲ್ಲರೂ ಬಜೆಟ್ ಬಗ್ಗೆ ನಿಮ್ಮ ಕಲ್ಪನೆ, ಸಲಹೆಗಳನ್ನು ಮೌ ಗೌ ವೆಬ್ನಲ್ಲಿ ಬರೆಯಿರಿ ಎಂದು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆ ಮೈ ಗೌ ಇಂಡಿಯಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ತಿಳಿಸಿತ್ತು. ನಿಮ್ಮ ಸಲಹೆಗಳನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ ಎಂದು 12 ಸೆಕೆಂಡ್ಗಳ ವಿಡಿಯೋ ಶೇರ್ ಮಾಡಿತ್ತು. ಆ ವಿಡಿಯೋವನ್ನು ರೀಟ್ವೀಟ್ ಮಾಡಿದ ಮೋದಿಯವರೂ ಸಲಹೆಗಳಿಗೆ ಆಹ್ವಾನಿಸಿದ್ದಾರೆ.
ಅಲ್ಲದೆ, ಭಾರತದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು, ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ದೇಶದ ಪ್ರಮುಖ ಉದ್ಯಮಿಗಳೊಂದಿಗೆ ನರೇಂದ್ರ ಮೋದಿಯವರು ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಚರ್ಚೆಯಲ್ಲಿ ಮುಖೇಶ್ ಅಂಬಾನಿ, ಟಾಟಾ ಗ್ರೂಪ್ನ ರತನ್ ಟಾಟಾ, ಸುನೀಲ್ ಭಾರ್ತಿ ಮಿತ್ತಲ್, ಗೌತಮ್ ಅದಾನಿ, ಆನಂದ್ ಮಹೀಂದ್ರಾ ಇತರರು ಇದ್ದರು ಎನ್ನಲಾಗಿದೆ. (ಏಜೆನ್ಸೀಸ್)