ನೂರಾರು ಗುಹೆಗಳನ್ನು ಕಂಡ... ಹತ್ತಾರು ಗಿರಿಗಳನ್ನು ತುಳಿದು ನಡೆದ...

-67d06d913950d
Published on
ಅಲ್ಲಮನು ಕಲ್ಯಾಣಕ್ಕೆ ಬರುವಾಗ ಸಿದ್ಧರಾಮ ಜೊತೆಗಿದ್ದ. ಈಗ ಅಲ್ಲಮನು ಒಬ್ಬಂಟಿ. ಇದು ಲೌಕಿಕಾರ್ಥದಲ್ಲಿ ನಿಜವಾದರೂ ಪಾರಮಾರ್ಥಿಕ ನೆಲೆಯಲ್ಲಿ ಬೇರೆಯೇ ಆದ ಸಂಗತಿ. ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯಲ್ಲಿ ಶಿವನ ಬಗೆಗೆ ಹೇಳುವ ವಚನವೊಂದು ಬರುತ್ತದೆ. ಅದು ಹೀಗಿದೆ: ನಡೆದಡೆ ನಿರ್ಗಮನಿ, ಸುಳಿದೆಡೆ/ ಗತಿವಿರಹಿತನನೇನೆಂಬೆನೆಂತೆಂಬೆ/ ಅಘಟಿತಘಟಿತ ಅಖಂಡಿತ/ಮಹಿಮನನೇನೆಂಬೆನೆಂತೆಂಬೆ/ ಆದಿಯಿಂದತ್ತ ಗೊಗ್ಗೇಶ್ವರನಲ್ಲಯ್ಯನ/ ಸುಳುಹು ಜಗಕ್ಕೆ ಪಾವನ (ಶೂನ್ಯ. ಸಂ.ಪು.180)

ಅಲ್ಲಮನು ನಡೆಯುತ್ತಿದ್ದಾನೆಂದು ತೋರುತ್ತದೆ. ಆದರೆ, ನಡೆಯುತ್ತಿಲ್ಲ. ಅವನು ಸುಳಿದಿದ್ದಾನೆಯೇ ಎಂದರೆ ಗತಿವಿರಹಿತ. ಇಂಥ ಪರಿಗೆ ಏನು ಹೇಳಬೇಕು? ಸಂಭವಿಸಿತು ಎನ್ನುವುದೆ? ಬಿಡಿ ಬಿಡಿ ಎನ್ನುವುದೆ? ಇಲ್ಲ, ಅಲ್ಲಮನು ಅಖಂಡ ಸ್ವರೂಪಿ. ಇಂಥ ಮಹಿಮೆಯುಳ್ಳವನನ್ನು ಏನೆಂದು ಹೇಳುವುದು? ಅವನ ಸುಳುಹಿಗೆ ಆದಿಯೂ ಇಲ್ಲ; ಅಂತ್ಯವೂ ಇಲ್ಲ. ಆದರೆ, ಅವನ ಸುಳುಹು ಜಗಕ್ಕೆ ಪಾವನವಾದುದೇ ಸರಿ! ಈ ವಚನವು ಒಂದೆಡೆ ಶಿವನನ್ನು ಹೇಳುತ್ತಿದ್ದರೂ ಅಲ್ಲಮನಿಗೂ ಅನ್ವಯಿಸುವ ಮಾತಾಗಿದೆ.

ಕಳೆದ ಎಂಟುನೂರು ವರ್ಷಗಳ ಹಿಂದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು ದುಸ್ಸಾಧ್ಯವೇ ಆಗಿತ್ತು. ದಟ್ಟಕಾಡು, ವನ್ಯಮೃಗಗಳ ಕಾಟ, ಕಿರುದಾರಿಗಳು ಕೆಲವೆಡೆ ಉಂಟು; ಕೆಲವೆಡೆ ಇಲ್ಲ. ಆಗ ಹಳ್ಳಿ-ಗ್ರಾಮಗಳೇ ಹೆಚ್ಚು! ಐದಾರು ಮನೆಗಳಿದ್ದರೆ ಅದನ್ನು ಹಳ್ಳಿಗಳೆಂದು ಕರೆಯುತ್ತಿದ್ದರು. ಇನ್ನು ಗ್ರಾಮವೆಂದರೆ ಎಪ್ಪತ್ತು-ಎಂಬತ್ತು ಮನೆಗಳಿದ್ದು ಊರಿನ ನಡುವೆ ಶಿವನ ದೇವಾಲಯ ಗ್ರಾಮದ ಪ್ರವೇಶದ್ವಾರದಲ್ಲಿ ಗ್ರಾಮದೇವತೆಯೇ ಇರುತ್ತಿದ್ದುದುಂಟು! ಸಾಮಾನ್ಯವಾಗಿ ಪಟ್ಟಣ-ನಗರ

ಎಂಬುದು ಹೆಚ್ಚಾಗಿ ನಾಗರಿಕರು ಇದ್ದ ಸ್ಥಳವಾಗಿತ್ತು. ಆಗ, ನಡೆದಾಡುವ ದಾರಿ ಗಳಿಗೆ ಅಜಪಥ- ಗಜಪಥ- ರಥಪಥ ಎಂಬ ಹೆಸರುಗಳು ಇರುತ್ತಿದ್ದವು. ಗ್ರಾಮದ ಜನ ಓಡಾಡುತ್ತಿದ್ದುದೇ ಕಾಲುದಾರಿಯಲ್ಲಿ! ಇದೆಲ್ಲಾ ಲೌಕಿಕರಾದ ನಮ್ಮ ಪಡಿಪಾಟಲು. ನಾವು ಇದೇ ಮಾತನ್ನು ಅಲ್ಲಮನಿಗೆ ಅನ್ವಯಿಸಿ ಹೇಳುವಂತಿಲ್ಲ.

ನಮ್ಮಲ್ಲಿ ಅಣಿಮಾದಿ ಅಷ್ಟಸಿದ್ಧಿಗಳುಂಟಷ್ಟೆ. ಇಂಥ ಸಿದ್ಧಿಯನ್ನು ಸಾಧಿಸಿದವರು ಯಾವ ಬಗೆಯ ಸ್ವರೂಪವನ್ನೂ ಪಡೆಯಬಲ್ಲರು. ದೇಹಬಾಧೆ- ಮನೋಬಾಧೆ ನಮಗೆ ಮಾತ್ರ. ಸಿದ್ಧಿಪುರುಷರಿಗೆ ಅನ್ವಯಿಸುವುದಿಲ್ಲ. ಅಲ್ಲಮನು ಲಿಂಗಲೀಲಾರೂಪಿ! ಅವನ ಕುರಿತಾದ ಈಚಿನ ಶರಣರೂ ಈ ಅಂಶವನ್ನೇ ಹೇಳಿದ್ದಾರೆ. ಇದು ಲೌಕಿಕನೆಲೆಗೆ ದಕ್ಕುವ ವಿಚಾರವಲ್ಲ.

ಅಲ್ಲಮನು ಕಲ್ಯಾಣದಿಂದ ಹೊರಟ ಮೇಲೆ ನೂರಾರು ಗುಹೆಗಳನ್ನು ಕಂಡ, ಹತ್ತಾರು ಗಿರಿಗಳನ್ನು ತುಳಿದು ನಡೆದ, ದಕ್ಷಿಣದ ಕಡೆ ಸಂಚಾರವನ್ನು ಬೆಳೆಸಿದ. ಅವನು ತಮಿಳುನಾಡಿನ ಪೊನ್ನಾಂಬಳನಾಥ ದೇವಾಲಯಕ್ಕೆ ಬಂದ. ಅಲ್ಲಿದ್ದ ಸದ್​ಭಕ್ತರನ್ನು ಅನುಗ್ರಹಿಸಿದ. ಪೊನ್ನಾಂಬಳನಾಥನನ್ನು ಅರ್ಚನೆ ಮಾಡುತ್ತಿದ್ದವರು ಅಲ್ಲಮನ ಕೃಪೆಗೂ ಪಾತ್ರರಾದರು. ಶಿವಗಣ ಪ್ರಸಾದಿಯ ಮಾತುಗಳನ್ನೊಮ್ಮೆ ಕೇಳೋಣ:

ಶಿವಧ್ಯಾನೈಕನಿಷ್ಠರಂ, ಶಿವ ಪ್ರಸಾದ ಪಾದೋದಕ ಸೇವ್ಯರಂ,/ಶಿವಲಿಂಗಾಂಗ ಸಂಬಂಧಿಗಳಂ/ ಶಿವಾನುಭವ ಸಂಪನ್ನರಂ/ಶಿವಾದ್ವೈತವೇದ್ಯರಂ, ಶಿವ ಜ್ಞಾನೋದಯ ಪ್ರಸನ್ನರೊಳು/ಸದ್​ಗೋಷ್ಠಿ ಸಂಬಂಧಮಂ ಸಮವೇಧಿಸಿ-ಸರ್ವರಂ ಜೀವನ್ಮುಕ್ತರಂ ಮಾಡಿ-ಶಿವಗಣಪ್ರಸಾದಿ ಮಹಾದೇವಯ್ಯನ ಮೇಲಿನ ಮಾತಿಗೆ ವಿವರಣೆ ಬೇಕಿಲ್ಲ. ಒಂದಂತು ಸತ್ಯ. ಅಲ್ಲಿದ್ದವರೆಲ್ಲಾ ಅಲ್ಲಮನ ಅನುಗ್ರಹಕ್ಕೆ ಪಾತ್ರರಾದರು! ಲೋಕದ ಜಂಜಡದಿಂದ ವಿಮುಖರಾದವರು ಶಿವಜ್ಞಾನವನ್ನು ಪಡೆಯುತ್ತಾರಷ್ಟೆ. ಅಂಥವರು ಅಂತಿಮವಾಗಿ ಜೀವನ್ಮುಕ್ತಸ್ಥಿತಿಯನ್ನು ಹೊಂದುತ್ತಾರೆ. ಅನುಭಾವದ ಸದ್​ಗೋಷ್ಠಿಯಲ್ಲಿ ಇದ್ದವರು ಜೀವನ್ಮುಕ್ತರಾಗದೆ ಇನ್ನೇನಾಗುತ್ತಾರೆ? ಅಲ್ಲಮನ ಪರಿಕ್ರಮದ ಸ್ವಾರಸ್ಯ ಇರುವುದೇ ಇಂಥ ಕಡೆಗಳಲ್ಲಿ!

ಅಲ್ಲಮನು ಪೂರ್ವಸಮುದ್ರದ ತೀರದಲ್ಲಿಯೇ ಹೊರಟು ರಾಮೇಶ್ವರಕ್ಕೆ ಬಂದ. ಅಲ್ಲಿ ಶಿವಸಂಕಥಾವಿನೋದದ ಮೂಲಕ ತನ್ನ ಲೀಲೆಯನ್ನು ತೋರಿಸಿದ. ರಾಮೇಶ್ವರ ಲಿಂಗಕ್ಕೆ ಪೂಜೆಯನ್ನು ಮಾಡಿದ. ಇದು ಅಲ್ಲಮನು ಲೋಕವ್ಯಾಪಾರವನ್ನು ತೋರಿಸಿದ ಒಂದು ಬಗೆ. ಅವನು ಪೂರ್ವಸಮುದ್ರದಿಂದ ದಕ್ಷಿಣಸಮುದ್ರದ ಕಡೆಗೆ ತಿರುಗಿದ! ಅವನು ಗೋಕರ್ಣಕ್ಕೆ ಬಂದು ಮಹಾಬಲೇಶ್ವರನನ್ನು ಪೂಜಿಸಿದ! ಅಲ್ಲಮನ ಸಂಚಾರ, ಸ್ವಲೀಲೆಯನ್ನು ತೋರಿಸುವುದು ಅವನ ಉದ್ದೇಶವಲ್ಲ. ಅವನು ಶಿವಲೀಲೆಯನ್ನು ತೋರಿಸುವುದೇ ಇಲ್ಲಿಯ ಪರಮೋದ್ದೇಶ.

ಆ ಮೂಲಕ ಶಿವಭಕ್ತರನ್ನು ಉದ್ಧರಿಸಬೇಕೆಂಬುದು ಇಲ್ಲಿಯ ಪ್ರಮುಖ ಆಶಯ. ಇನ್ನು ಅಲ್ಲಮನ ಸಂಚಾರ ಇಲ್ಲಿಗೆ ಮುಗಿಯಲಿಲ್ಲ. ಅವನು ದಕ್ಷಿಣಸಮುದ್ರದ ಗೋಕರ್ಣದಿಂದ ಸೌರಾಷ್ಟ್ರಕ್ಕೆ ಬಂದ. ಆ ಕಾಲಕ್ಕೆ ದ್ವಾದಶಲಿಂಗಗಳಲ್ಲಿ ಸೌರಾಷ್ಟ್ರ ಸೋಮನಾಥಲಿಂಗ ಹೆಸರನ್ನು ಪಡೆದಿತ್ತು. ಅಲ್ಲಮನ ಸಂಚಾರ ಇಲ್ಲಿಗೆ ಮುಗಿಯುವುದಿಲ್ಲ. ಶಿವಗಣಪ್ರಸಾದಿ ಮಹಾದೇವಯ್ಯನು ಅಲ್ಲಮನ ಸಂಚಾರದ ಒಂದು ನಕ್ಷೆಯನ್ನು ಮಾತ್ರ ನಮಗಿಲ್ಲಿ ಸಂಕ್ಷಿಪ್ತವಾಗಿ ನೀಡುತ್ತಿದ್ದಾನೆ. ಇಲ್ಲಿ ಬಂದಿರುವ ವಿವರಗಳು, ಸೂಕ್ಷ್ಮವಾಗಿ ಚಾರಿತ್ರಿಕ ನೆಲೆಯನ್ನು ಹೊಂದಿವೆ. ಈಗ ಅಲ್ಲಮನು ಉತ್ತರದಿಕ್ಕಿನ ಕಡೆಗೆ ತನ್ನ ಪ್ರಯಾಣವನ್ನು ಬೆಳೆಸುತ್ತಾನೆ. (ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು, ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net