

ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಅವರಿಗೂ ಕರೊನಾ ದೃಢಪಟ್ಟಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇತ್ತಿಚೆಗಷ್ಟೇ ಕೊವಿಡ್-19 ಟೆಸ್ಟ್ಗೆ ಒಳಗಾಗಿದ್ದ ಸಚಿವ ರವಿ ಅವರ ತಪಾಸಣಾ ವರದಿ ನೆಗೆಟಿವ್ ಎಂದು ಮೊನ್ನೆಯಷ್ಟೇ ಹೊರಬಿದ್ದಿತ್ತು.
ತಮ್ಮ ಕೊವಿಡ್-19 ಟೆಸ್ಟ್ ವರದಿಯ ಫೋಟೋವನ್ನು ಸಿ.ಟಿ.ರವಿ ಅವರೇ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಕರೊನಾ ವರದಿ ನೆಗೆಟಿವ್ ಬಂದಿದೆ. ನಾನು ಎಂದಿನಂತೆ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಆದರೆ ಇಂದು ಸಿ.ಟಿ.ರವಿಯವರಲ್ಲಿ ಕರೊನಾ ದೃಢಪಟ್ಟ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಚಿವರು ಟ್ವೀಟ್ ಮಾಡಿ, ನಾನು ಕ್ಷೇಮವಾಗಿದ್ದೇನೆ. ಕರೊನಾ ಲಕ್ಷಣಗಳು ಇಲ್ಲ. ಈಗ ಹೋಂ ಕ್ವಾರಂಟೈನ್ನಲ್ಲಿದ್ದೇನೆ. ಸದ್ಯ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ತಮಗೆ ಕರೊನಾ ಸೋಂಕು ತಗುಲಿದೆ ಎಂಬುದನ್ನೇನೂ ಅವರು ಹೇಳಿಲ್ಲ.
ಜು.6ರಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಪ್ರಾಣೇಶ್ ಜತೆ ಸಂಪರ್ಕದಲ್ಲಿದ್ದ ಇಬ್ಬರು ಬಿಜೆಪಿ ಮುಖಂಡರೊಂದಿಗೆ ಸಿ.ಟಿ.ರವಿಯವರೂ ಪ್ರಾಥಮಿಕ ಸಂಪರ್ಕಹೊಂದಿದ್ದರು. ಇನ್ನು ಕೊವಿಡ್-19 ವ್ಯಾಪಕವಾಗಿ ಹರಡುತ್ತಿದ್ದರೂ ಸಿ.ಟಿ.ರವಿಯವರು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದರು.