

ಆಂಧ್ರಪ್ರದೇಶ: ಮುಂಬರುವ ಕ್ರೈಮ್ ಕಥಾಹಂದರ ಸಿನಿಮಾ 'ಒಡೆಲಾ 2' ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಬಹುಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬುದು ಸದ್ಯ ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಹಿನ್ನೆಲೆ ಮಹಾಶಿವರಾತ್ರಿಯ ದಿನದಂದೇ ಚಿತ್ರ ತಯಾರಕರು ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದರು. ಪೋಸ್ಟರ್ ನೋಡಿದ ಸಿನಿಪ್ರಿಯರು ಇದೇನೋ ಬೇರೇನೆ ಕಥೆ ಹೇಳಲು ಹೊರಟಿರುವಂತೆ ಕಾಣಿಸುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ.
ಸಂಪತ್ ನಂದಿ ನಿರ್ಮಾಣದ ಈ ಚಿತ್ರದಲ್ಲಿ ತಮನ್ನಾ ಪಾತ್ರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಪೋಸ್ಟರ್ ಮೂಲಕ ಸಿನಿಮಾದಲ್ಲಿ ನಟಿ ಶಿವನ ಅಪ್ಪಟ ಭಕ್ತೆ ಎಂಬುದು ತಿಳಿದುಬಂದಿದೆ. ಈ ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ನೋಟ್ ಬರೆದ ಸಂಪತ್, ವಿಶೇಷವಾಗಿ ತಮನ್ನಾಗೆ ಬರೆದಿರುವುದು ಎಲ್ಲರ ಗಮನಸೆಳೆದಿದೆ. ಇದು ನಟಿಯ ಮೆಚ್ಚುಗೆಗೂ ಕಾರಣವಾಗಿದೆ.
ರಚ್ಚಾ ನಿರ್ದೇಶಕರ ಬಗ್ಗೆ ನಟಿಯ ಇತ್ತೀಚಿನ ಟ್ವೀಟ್ ಈಗ ವೈರಲ್ ಆಗುತ್ತಿದ್ದು, “ಚಿತ್ರ ನಿರ್ಮಾಣವು ಒಗ್ಗಟಿನಿಂದ ಕೂಡಿರುವುದು ಎಂಬುದನ್ನು ನಾನು ಬಲವಾಗಿ ನಂಬ್ತೀನಿ. ಮೊದ ಮೊದಲು ಇದು ಒಬ್ಬ ವ್ಯಕ್ತಿಯ ದೃಷ್ಟಿಕೋನದಿಂದ ಪ್ರಾರಂಭವಾದರೂ, ತದನಂತರ ಪ್ರತಿಯೊಬ್ಬ ತಂಡದ ಸದಸ್ಯರ ದೃಷ್ಟಿಕೋನವಾಗಿ ಬದಲಾಗಲಿದೆ. ಸಂಪತ್ ಇದನ್ನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದಾರೆ" ಎಂದರು.
“ನನ್ನ 19 ವರ್ಷದ ವೃತ್ತಿಜೀವನದಲ್ಲಿ, ಒಬ್ಬ ವ್ಯಕ್ತಿಯ ಪರಿಶ್ರಮವನ್ನು ಪ್ರತ್ಯೇಕವಾಗಿ ಮೆಚ್ಚಿ ಮಾತನಾಡುವುದನ್ನು ನೋಡೇ ಇರಲಿಲ್ಲ. ಅವರ ಕೆಲಸ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಪ್ರತಿ ಕೊಡುಗೆಯನ್ನು ಪ್ರಶಂಸಿಸುವುದನ್ನು ನಾನು ನೋಡಿಲ್ಲ. ತಂಡದ ಎಲ್ಲರ ಪ್ರಯತ್ನದಿಂದ ಪೋಸ್ಟರ್‌ನ ಅಂತಿಮ ಲುಕ್ ಈಗ ಹೊರಬಿದ್ದಿದೆ. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ ತಮನ್ನಾ.
'ಒಡೆಲಾ 2' ಚಿತ್ರವನ್ನು ಅಶೋಕ್ ತೇಜ ನಿರ್ದೇಶಿಸಲಿದ್ದು, ಮಧು ಕ್ರಿಯೇಷನ್ಸ್ ಸಹಯೋಗದಲ್ಲಿ ಸಂಪತ್ ನಂದಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಮೊದಲ ಭಾಗದ ಭಾಗವಾಗಿದ್ದ ಯುವ ನಟಿ ಹೆಬ್ಬಾ ಪಟೇಲ್ ಮತ್ತು ಕನ್ನಡದ ನಟ ವಸಿಷ್ಟ ಸಿಂಹ ಕೂಡ ಈ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).