ಹುಡುಗಿ ರಕ್ಷಿಸುವಲ್ಲಿ ವಿಫಲನಾದೆ; ರಾಜೀನಾಮೆ ನೀಡುವುದಾಗಿ ಕಣ್ಣೀರಿಟ್ಟ ಸಂಸದ | I Failed, I will Resign

Untitled design (96)
Published on

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಬೆತ್ತಲೆ ಶವವಾಗಿ ಪತ್ತೆಯಾದ ಬೆನ್ನಲ್ಲೇ ರಾಜಕೀಯ ರಂಗೇರಿದೆ. ಈ ವಿಷಯದ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಇದೀಗ ಅವರ ಪಕ್ಷದ ಅಯೋಧ್ಯೆಯ ಸಂಸದ ಅವಧೇಶ್ ಪ್ರಸಾದ್ ಅವರು ಅಳುತ್ತಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.(I Failed, I will Resign)

ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಅವಧೇಶ್ ಪ್ರಸಾದ್​​​​​ ಇದ್ದಕ್ಕಿದ್ದಂತೆ ಮಾಧ್ಯಮಗಳ ಮುಂದೆ ಜೋರಾಗಿ ಅಳಲು ಪ್ರಾರಂಭಿಸಿದರು. ಭಗವಾನ್ ಶ್ರೀರಾಮನ ನಾಮಸ್ಮರಣೆ ಮಾಡುತ್ತಾ ಅಳಲು ಆರಂಭಿಸಿದ ಅವರನ್ನು ಬೆಂಬಲಿಗರು ಸಮಾಧಾನಪಡಿಸುವುದನ್ನು ನೋಡಬಹುದು. ನಿಮ್ಮ ಮಗಳಿಗಾಗಿ ಹೋರಾಡಿ ಆಕೆಗೆ ನ್ಯಾಯ ಸಿಗುತ್ತದೆ ಎಂದು ಬೆಂಬಲಿಗರು ಹೇಳುತ್ತಾರೆ. ಇದಾದ ನಂತರ ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರ ಬಳಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಸಂಸದರು ಕಣ್ಣೀರಿಟ್ಟರು. ದಲಿತ ಮಗಳಿಗೆ ನ್ಯಾಯ ಸಿಗದಿದ್ದರೆ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ನಾವು ದೆಹಲಿಗೆ ಹೋಗೋಣ, ಲೋಕಸಭೆಗೆ ಹೋಗೋಣ, ನಾವು ನಮ್ಮ ವಿಷಯವನ್ನು ಮೋದಿಯವರ ಮುಂದೆ ಮಂಡಿಸುತ್ತೇವೆ. ನಮಗೆ ನ್ಯಾಯ ಸಿಗದಿದ್ದರೆ ಲೋಕಸಭೆಗೆ ರಾಜೀನಾಮೆ ನೀಡುತ್ತೇವೆ. ಮಗಳ ಗೌರವ ಉಳಿಸುವಲ್ಲಿ ವಿಫಲರಾಗಿದ್ದೇವೆ. ಇತಿಹಾಸ ಏನು ಹೇಳುತ್ತದೆ? ನಿಮ್ಮ ಮಗಳಿಗೆ ಇದು ಹೇಗೆ ಆಯಿತು ಎಂದು ಅಳುತ್ತಾ 'ಓ ಮರ್ಯಾದಾ ಪುರುಷೋತ್ತಮ ರಾಮ್, ಎಲ್ಲಿದ್ದೀಯಾ? ಸೀತಾ ಮಾತೆ ಎಲ್ಲಿದ್ದೀಯ? ಎಂದು ಹೇಳಿದ್ದಾರೆ.

ಸಂಸದ ಅವಧೇಶ್ ಪ್ರಸಾದ್ ದೆಹಲಿಗೆ ಹೋಗುತ್ತೇವೆ, ರಾಜೀನಾಮೆ ನೀಡುತ್ತೇವೆ ಎಂದು ಪದೇ ಪದೆ ಹೇಳುತ್ತಿದ್ದರು. ಮತ್ತೊಂದೆಡೆ ಅವರ ಬೆಂಬಲಿಗರು ರಾಜೀನಾಮೆ ಬೇಡ ಎಂದು ಪಟ್ಟು ಹಿಡಿದರು. ಹೋರಾಟ ಮಾಡಿ ಹುಡುಗಿಗೆ ನ್ಯಾಯ ದೊರಕಿಸಿಕೊಡಬೇಕು. ಈ ಘಟನೆಯು ನಿರ್ಭಯಾ ಘಟನೆಗಿಂತ ಗಂಭೀರವಾದ ವಿಷಯ ಎಂದು ಬಣ್ಣಿಸಿದರು. ಇದರೊಂದಿಗೆ ಧಾರ್ಮಿಕ ನಂಬಿಕೆಗಳ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗಿಲ್ಲ ಎಂದು ಆರೋಪಿಸಿ ಪೊಲೀಸರ ಮೇಲೆ ಪ್ರಶ್ನೆಗಳನ್ನು ಎತ್ತಲಾಯಿತು. ಬಾಲಕಿಯ ಕುಟುಂಬಕ್ಕೆ ಭದ್ರತೆ ನೀಡಬೇಕು ಹಾಗೂ ಆರೋಪಿಗಳನ್ನು ಬಂಧಿಸಿ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಘಟನೆಯ ವಿವರ

ಗುರುವಾರ ರಾತ್ರಿಯಿಂದ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಮೃತಳ ಕುಟುಂಬದವರು ತಿಳಿಸಿದ್ದಾರೆ. ಅದರ ನಂತರ ಅವರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆಕೆಯ ಸೋದರ ಮಾವ ಶನಿವಾರ ಬೆಳಗ್ಗೆ ಅವರ ಗ್ರಾಮದಿಂದ ಕೇವಲ 500 ಮೀಟರ್ ದೂರದಲ್ಲಿರುವ ಸಣ್ಣ ಕಾಲುವೆಯಲ್ಲಿ ಆಕೆಯ ಶವವನ್ನು ನೋಡಿದ್ದಾರೆ. ಆಕೆಯ ಕೈ ಮತ್ತು ಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು ಮತ್ತು ಆಕೆಯ ದೇಹದಲ್ಲಿ ಹಲವಾರು ಆಳವಾದ ಗಾಯಗಳಾಗಿದ್ದವು ಎಂದು ಕುಟುಂಬದವರು ಹೇಳಿದ್ದಾರೆ.

ಆಕೆಯ ಒಂದು ಕಾಲು ಮುರಿತವಾಗಿದ್ದು, ಶವದ ಭೀಕರ ಸ್ಥಿತಿಯನ್ನು ನೋಡಿ ಆಕೆಯ ಅಕ್ಕ ಮತ್ತು ಇತರ ಇಬ್ಬರು ಮಹಿಳೆಯರು ಮೂರ್ಛೆ ಹೋಗಿರುವುದನ್ನು ಗಮನಿಸಿದ ಗ್ರಾಮಸ್ಥರು ಶವವನ್ನು ಸ್ಥಳಾಂತರಿಸಿದರು. ಶುಕ್ರವಾರ ದೂರು ಸ್ವೀಕರಿಸಿದ ನಂತರ ಪೊಲೀಸರು ಕಾಣೆಯಾದವರ ವರದಿಯನ್ನು ದಾಖಲಿಸಿಕೊಂಡಿದ್ದಾರೆ ಎಂದು ಆಫೀಸರ್ ಅಶುತೋಷ್ ತಿವಾರಿ ತಿಳಿಸಿದ್ದಾರೆ. ಮೃತದೇಹ ಪತ್ತೆಯಾದ ನಂತರ ಮುಂದಿನ ಕ್ರಮಕೈಗೊಳ್ಳಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ  ನಾವು ಅದರಂತೆ ಮುಂದುವರಿಯುತ್ತೇವೆ ಎಂದು ಅಧಿಕಾರಿಯು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net