

ಶಿವಮೊಗ್ಗ: ನಿರಂತರ ಹೋರಾಟದ ಫಲವಾಗಿ ರಾಜ್ಯದ ಸರ್ಕಾರಿ ನೌಕರರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದ್ದು, ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುವುದು ಸಾಧ್ಯವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಜನ್ಮದಿನದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘಟನೆಯಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಾಮಾನ್ಯ ನೌಕರ ಕೂಡ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಶಿವಮೊಗ್ಗದಲ್ಲಿ ನಾನು ಎದುರಿಸಿದ ಸವಾಲುಗಳೇ ನಿದರ್ಶನ ಎಂದು ತಿಳಿಸಿದರು.
31ನೇ ವಯಸ್ಸಿನಲ್ಲಿ ನಾನು ನೌಕರರ ಸಂಘದ ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಬೆನ್ನಿಗೆ ಪ್ರಭಾವಿಗಳು ಯಾರೂ ಇರಲಿಲ್ಲ. ಚುನಾವಣೆಗೆ ಸ್ಪರ್ಧಿಸದಂತೆ ರಾಜಕೀಯ ಒತ್ತಡವೂ ಇತ್ತು. ಇಂದು ಆಪ್ತರಾಗಿ ಮಾತನಾಡುವ ಜನಪ್ರತಿನಿಧಿಗಳು ಕೂಡ ನನ್ನ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು. ಅದೆಲ್ಲವನ್ನೂ ಮೀರಿ ನಿಂತು ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದೆ. ನಂತರ 2019ರಲ್ಲಿ ಮತ್ತೆ ಅಧಿಕಾರ ಸಿಕ್ಕಿತು. ಶಿವಮೊಗ್ಗದಲ್ಲಿ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡುವಾಗ ಸಾಕಷ್ಟು ಆರೋಪಗಳನ್ನೂ ಎದುರಿಸಬೇಕಾಯಿತು ಎಂದರು.
ಎರಡನೇ ಬಾರಿಗೆ ರಾಜ್ಯಾಧ್ಯಕ್ಷರ ಚುನಾವಣೆಯಲ್ಲೂ ಒತ್ತಡ ಹೆಚ್ಚಾಗಿತ್ತು. ಆದರೂ ದೇವರ ದಯೆ, ನಾನು ಮಾಡಿದ ಕಾರ್ಯಗಳಿಂದ ಮತ್ತೆ ಗೆದ್ದೆ. ಸಿದ್ದಗಂಗಾ ಹಾಗೂ ಸುತ್ತೂರು ಶ್ರೀಗಳು ನೀನು ಗೆದ್ದಿಲ್ಲ, ನೀನು ಮಾಡಿದ ಕೆಲಸ ಹಾಗೂ ಸೇವೆಗಳು ಗೆದ್ದಿವೆ ಎಂದಿದ್ದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.
ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಕಾರ್ಯದರ್ಶಿ ಆರ್.ಪಾಪಣ್ಣ, ಕಾರ್ಯಾಧ್ಯಕ್ಷ ಡಾ. ಸಿ.ಎ.ಹಿರೇಮಠ, ಗೌರವಾಧ್ಯಕ್ಷ ಆರ್.ನರಸಿಂಹಮೂರ್ತಿ, ಟಿ.ಕೊಟ್ರೇಶ್, ಭದ್ರಾವತಿ ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ, ಡಿಎಸ್‌ಎಸ್ ಮುಖಂಡ ಎಂ.ಗುರುಮೂರ್ತಿ, ಪ್ರಮುಖರಾ ಬಳ್ಳೇಕೆರೆ ಸಂತೋಷ್, ಸತೀಶ್‌ಕುಮಾರ್ ಶೆಟ್ಟಿ ಇತರರಿದ್ದರು.