ಸಿಟಿ ರವಿ ಡಿಜಿಪಿಗೆ ದೂರು ನೀಡಿರುವುದು ಗೊತ್ತಿಲ್ಲ; ಡಾ.ಜಿ.ಪರಮೇಶ್ವರ|I don't know

ggp1
Published on

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿಯಿಂದ ಡಿಜಿಪಿ ಗೆ ದೂರು ನನಗೆ ಗೊತ್ತಿಲ್ಲ(I don't know if CT Ravi has complained to DGP) . ದೂರು ಕೊಟ್ಟಿದ್ದರೆ ಡಿಜಿಪಿ ಅವರೇ ಅದಕ್ಕೆ ಉತ್ತರ ಕೊಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ( Dr. G. Parameshwara) ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ರವಿ ದೂರು ಕೊಟ್ಟಿಲ್ಲ, ನನಗೆ ಕೊಟ್ಟಿದ್ದರೆ ನಾನು ಉತ್ತರ ಕೊಡುತ್ತಿದ್ದೆ ಎಂದರು.

ಸಿಎಂ, ಗೃಹ ಸಚಿವರ ಆದೇಶಗಳನ್ನೇ ಪೊಲೀಸರು ಪಾಲಿಸುತ್ತಾರೆ. ಬೇರೆಯವರು ಆದೇಶ ಕೊಟ್ಟರೆ ಪಾಲಿಸುವುದಿಲ್ಲ. ಈಗ ರವಿ ಆಪಾದನೆ ಮಾಡಿದ್ದಾರೆ, ಅದಕ್ಕೆ ಡಿಜಿಪಿಯವರೇ ಉತ್ತರ ಕೊಡುತ್ತಾರೆ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕುಟುಕಿದರು.

ಐಶ್ವರ್ಯ ಗೌಡ ಹಣವನ್ನು ಚುನಾವಣೆಗೆ ಬಳಸಲಾಗಿದೆ ಎಂದು ಶಾಸಕ ನರೇಂದ್ರಸ್ವಾಮಿ ಮೇಲೆ ಮಾಜಿ ಶಾಸಕ ಅನ್ನದಾನಿ ಮಾಡಿರುವ ಆರೋಪ ಕುರಿತ ಪ್ರಶ್ನೆಗೆ, ಅದರ ಬಗ್ಗೆ ಗೊತ್ತಿಲ್ಲ, ಅದು ನನ್ನ ಗಮನದಲ್ಲಿಲ್ಲ. ಮಾಜಿ ಸಂಸದ ಡಿ.ಕೆ.ಸುರೇಶ್ ದೂರು ಕೊಟ್ಟಿದ್ದಾರೆ. ಪೊಲೀಸರು ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಠಾಣೆಗಳಲ್ಲಿ ದಾಖಲಾಗುವ ದೂರಿಗೆ ತಲೆ ಹಾಕುವುದಿಲ್ಲ. ಸರ್ಕಾರ ಎಲ್ಲಿಯೂ ಮೂಗು ತೂರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಮಗೆ ಸಿಎಂ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ, ನಮ್ಮ ಪಕ್ಷ ಯಾವುದೇ ಜವಾಬ್ದಾರಿ ಕೊಡಲಿ ನಿರ್ವಹಿಸುತ್ತೇನೆ. ಕೊಟ್ಟಿದ್ದನ್ನು ಯಶಸ್ವಿಯಾಗಿ ಮಾಡಿದ್ದೇನೆ. 1987ರಿಂದಲೂ ಪಕ್ಷ ಕೊಟ್ಟ ಹೊಣೆ ನಿರ್ವಹಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಸಿಐಡಿಯಿಂದ ಪರಿಷತ್ ಮಹಜರು ಬಗ್ಗೆ ಸಭಾಪತಿಗೆ ಪತ್ರ ಬರೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಸಿಐಡಿಯವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮಹಜರ್ ಬಗ್ಗೆ ಸಿಐಡಿ ಪೊಲೀಸರೇ ತೀರ್ಮಾನಿಸುತ್ತಾರೆ. ಯಾವ ರೀತಿಯ ಮಹಜರ್ ಎಂಬುದನ್ನು ಅವರೇ ನಿರ್ಧರಿಸುತ್ತಾರೆ.

ಅವರದ್ದೇ ಆದ ಮೆಥಡಾಲಜಿ ಬಳಸಿ ಮಹಜರ್ ಮಾಡುತ್ತಾರೆ. ಮಹಜರ್‌ಗೆ ಒಪ್ಪಿಗೆ ಕೊಡಬೇಕೋ ಬೇಡವೋ ಎಂಬುದನ್ನು ಸಭಾಪತಿಯವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ವಿಚಾರ ಕುರಿತು, ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಸಿಎಂ ನಿರ್ಧಾರಿಸುತ್ತಾರೆ. ಮಾರ್ಚ್‌ನಲ್ಲಿ ಬಜೆಟ್ ಮಂಡನೆ ಇದೆ. ಆ ವೇಳೆ ಪರಿಶೀಲನೆ ಮಾಡುತ್ತಾರೆ. ಜಿಎಸ್‌ಟಿಗೆ ತಂದರೆ ಲಾಭ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ರಾಜ್ಯಗಳಿಗೆ ಲಾಭವಾಗುವಂತೆ ಕೇಂದ್ರ ಸಹಕರಿಸಬೇಕು. ಆಗ ಮಾತ್ರ ಜಿಎಸ್‌ಟಿ ವ್ಯಾಪ್ತಿಗೆ ತರಬಹುದು. ನಮಗೆ ತೊಂದರೆ ಆಗುವ ಹಾಗಿದ್ದರೆ ಒಪ್ಪುವುದು ಕಷ್ಟ ಎಂದು ಹೇಳಿದರು.

ಬಹಳ ಶಾಂತಿಯಿಂದ ಹೊಸ ವರ್ಷ ಆಚರಣೆ ಆಗಿದೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ಆಗಿಲ್ಲ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ನಾನು ಎಲ್ಲಿಯೂ ಭೇಟಿ ನೀಡಿಲ್ಲ ಎಂದು ಡಾ.ಪರಮೇಶ್ವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net