ಗಡ್ಡ ಬಿಟ್ಟಿದ್ದರಿಂದ ಭಯೋತ್ಪಾದಕ ದಾಳಿಯಿಂದ ಪಾರಾದ ವ್ಯಕ್ತಿ! ನಿಜಕ್ಕೂ ಏನಾಯಿತು ಗೊತ್ತಾ? Pahalgam attack

Assam professor recounts encounter with terrorists
Published on

Pahalgam attack: ಪಹಲ್ಗಾಮ್ ಭಯೋತ್ಪಾದಕ ದಾಳಿಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಭಯೋತ್ಪಾದಕರ ಗುಂಡುಗಳಿಗೆ ಪ್ರವಾಸಿಗರು ಬಲಿಯಾದರು.  ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಯಿತು. ಭಯೋತ್ಪಾದಕ ದಾಳಿಯಲ್ಲಿ 28 ಜನರು ಪ್ರಾಣ ಕಳೆದುಕೊಂಡರು ಮತ್ತು ಅನೇಕರು ಗಾಯಗೊಂಡರು.

ಕೆಲವರು ಭಯೋತ್ಪಾದಕ ದಾಳಿಯಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ. ಸುರಕ್ಷಿತವಾಗಿ ಪಾರಾದವರಲ್ಲಿ ಅಸ್ಸಾಂನ ಒಂದು ಕುಟುಂಬವೂ ಸೇರಿತ್ತು. ಗಡ್ಡದ ಕಾರಣದಿಂದಾಗಿ ಬಂದೂಕುಧಾರಿಗಳು ಕುಟುಂಬದ ಮುಖ್ಯಸ್ಥರನ್ನು  ಬಿಟ್ಟು ಕಳಿಸಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ ನಿಜಕ್ಕೂ ಏನಾಯ್ತು ಎನ್ನುವುದನ್ನು ನಾವು ಇಂದು ತಿಳಿದುಕೊಳ್ಳೋಣ...

ಪಹಲ್ಗಾಮ್‌ನ ಬೈಸರನ್ ಬಳಿ ನಡೆದ ಮಾರಕ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರಲ್ಲಿ ಅಸ್ಸಾಂ ವಿಶ್ವವಿದ್ಯಾಲಯದ ಬಂಗಾಳಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ದೇಬಾಶಿಶ್ ಭಟ್ಟಾಚಾರ್ಯ ಕೂಡ ಒಬ್ಬರು. ಅವರು ಎದುರಿಸಿದ ಭಯಾನಕ ಕ್ಷಣಗಳನ್ನು ವಿವರಿಸಿದರು. ದೇಬಾಶಿಶ್ ಭಟ್ಟಾಚಾರ್ಯ ತಮ್ಮ ಪತ್ನಿ ಮತ್ತು ಮಗನೊಂದಿಗೆ ಕಾಶ್ಮೀರಕ್ಕೆ ಹೋದರು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಅವರು ಅದೇ ಸ್ಥಳದಲ್ಲಿದ್ದರು.

ಪ್ರೊಫೆಸರ್ ಭಟ್ಟಾಚಾರ್ಯ ಅವರು ಪಹಲ್ಗಾಮ್‌ ಘಟನೆಯ ಕುರಿತಾಗಿ ಮಾತನಾಡಿ, ನಾನು ನನ್ನ ಕುಟುಂಬದೊಂದಿಗೆ ಮರದ ಕೆಳಗೆ ಮಲಗಿದ್ದಾಗ ಇದ್ದಕ್ಕಿದ್ದಂತೆ ನನ್ನ ಸುತ್ತಲೂ ದೊಡ್ಡ ಶಬ್ದಗಳು ಕೇಳಿದವು. ಅಲ್ಲಿರುವ ಎಲ್ಲರೂ ಕಲ್ಮಾ ( ಇಸ್ಲಾಂನಲ್ಲಿ ಕಲ್ಮಾ ಎಂಬುದು ನಂಬಿಕೆಯ ಘೋಷಣೆಯಾಗಿದ್ದು ಅದು ಅಲ್ಲಾಹನ ಏಕತೆ ಮತ್ತು ಮುಹಮ್ಮದ್ ಅವರ ಪ್ರವಾದಿತ್ವದಲ್ಲಿನ ನಂಬಿಕೆಯನ್ನು ದೃಢೀಕರಿಸುತ್ತದೆ.) ಪಠಿಸುತ್ತಿದ್ದಾರೆ. ನಾನು ಕೂಡ ಅದನ್ನು ಪಠಿಸಲು ಪ್ರಾರಂಭಿಸಿದೆ. ಕೆಲವು ಕ್ಷಣಗಳ ನಂತರ, ಒಬ್ಬ ಭಯೋತ್ಪಾದಕ ನಮ್ಮ ಕಡೆಗೆ ನಡೆದು ಬಂದು ನನ್ನ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯ ತಲೆಗೆ ಗುಂಡು ಹಾರಿಸಿದ. ನಂತರ ಆ ಭಯೋತ್ಪಾದಕ ನನ್ನ ಕಡೆಗೆ ತಿರುಗಿದ. ಅವನು ನನ್ನತ್ತ ನೇರವಾಗಿ ನೋಡಿ, "ನೀನು ಏನು ಮಾಡ್ತಿದ್ದೀಯಾ?" ಎಂದು ಕೇಳಿದನು. ನಾನು ಏನನ್ನೂ ಹೇಳದೆ ಕಲ್ಮಾವನ್ನು ಇನ್ನೂ ಜೋರಾಗಿ ಪಠಿಸಿದೆ. ನಂತರ ಭಯೋತ್ಪಾದಕ ಹಿಂದೆ ತಿರುಗಿ ಹೊರಟುಹೋದನು ಎಂದಿದ್ದಾರೆ.

ನಾನು ಸದ್ದಿಲ್ಲದೆ ಎದ್ದು ನನ್ನ ಹೆಂಡತಿ ಮತ್ತು ಮಗನೊಂದಿಗೆ ಅಲ್ಲಿಂದ ಓಡಿಹೋದೆ. ನಾವು ಬೆಟ್ಟವನ್ನು ಹತ್ತಿ, ಬೇಲಿಯನ್ನು ದಾಟಿ, ದಾರಿಯುದ್ದಕ್ಕೂ ಕುದುರೆಗಳ ಗೊರಸುಗಳ ಗುರುತುಗಳನ್ನು ಅನುಸರಿಸಿ ಸುಮಾರು ಎರಡು ಗಂಟೆಗಳ ಕಾಲ ನಡೆದೆವು.  ನಮ್ಮ ಹೋಟೆಲ್‌ಗೆ ಹಿಂತಿರುಗಿದೆವು ಎಂದು ದೇಬಾಶಿಶ್ ಭಟ್ಟಾಚಾರ್ಯ ಹೇಳಿದರು.

ದೇಬಾಶಿಶ್ ಭಟ್ಟಾಚಾರ್ಯ ಅವರಿಗೆ ಗಡ್ಡವಿದೆ. ಅವನಿಗೆ ಮುಸ್ಲಿಮರಂತೆಯೇ ಗಡ್ಡ, ಸ್ವಲ್ಪ ಬಿಳಿ, ಸ್ವಲ್ಪ ಕಪ್ಪು. ಭಯೋತ್ಪಾದಕರು ಅವರನ್ನು ಮುಸ್ಲಿಂ ಎಂದು ಭಾವಿಸಿ ಬಿಟ್ಟು ಹೋಗಿರಬಹುದು ಎಂದು ಅವರ ಕುಟುಂಬ ಸದಸ್ಯರು ಹೇಳುತ್ತಾರೆ.

ದೇಬಶಿಶ್ ಭಟ್ಟಾಚಾರ್ಯ, ಮಧುಮಿತಾ ದಾಸ್ ಭಟ್ಟಾಚಾರ್ಯ ಮತ್ತು ದ್ರೌಪದಿ ಭಟ್ಟಾಚಾರ್ಯ ಸದ್ಯ ಶ್ರೀನಗರದಲ್ಲಿ ಸುರಕ್ಷಿತವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net