

ರಾಮನಗರ: 18 ಸೀಟು ಇಟ್ಟುಕೊಂಡು ಸರ್ಕಾರ ಮಾಡಲು ಸಾಧ್ಯವೇ? ಬಿಜೆಪಿಯವರು ದಡ್ಡರು, ಕೇವಲ ಎರಡು ಕ್ಷೇತ್ರ ಗೆದ್ದಿರುವುದಕ್ಕೆ ಕೇಂದ್ರದಲ್ಲಿ ಮಂತ್ರಿ ಮಾಡಿದ್ದಾರೆ. ಕಾಂಗ್ರೆಸ್ನವರಾಗಿದ್ದರೆ ಅವರನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈ ಹಿಂದೆ ಅವರ ಸಹವಾಸ ಮಾಡಿ ಅನುಭವಿಸಿದ್ದು ಸಾಕಾಗಿದೆ. ಚುನಾವಣೆ ಸಮೀಪಿಸಲಿ ಆಗ ಆ ಬಗ್ಗೆ ಮಾತನಾಡುತ್ತೇನೆ ಎಂದು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್(DCM DK Shivakumar ) ಹೇಳಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಲೆ ತೋಟದ ಹಳ್ಳಿ, ಅಕ್ಕೂರು ಪ್ರಚಾರ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಎಂಟೂವರೆ ವರ್ಷಗಳ ಕಾಲ ಯಾರೂ ಅಲುಗಾಡಿಸಲು ಆಗುವುದಿಲ್ಲ. ಕುಮಾರಸ್ವಾಮಿ ಮತ್ತೊಂದು ಜನ್ಮ ಎತ್ತಿ ಬಂದರೂ ಏನೂ ಮಾಡಲು ಸಾಧ್ಯವಿಲ್ಲ. ಚುನಾವಣೆಗೆ ನಾಲ್ಕೈದು ದಿನವಿರುವಾಗ ಜನರ ಬಳಿಗೆ ಬರುವ ಕುಮಾರಸ್ವಾಮಿ ಅವರೇ, ನಿಮ್ಮ ಈ ಧೋರಣೆಯನ್ನು ಇನ್ನೆಷ್ಟು ದಿನ ಮುಂದುವರಿಸಿಕೊಂಡು ಹೋಗುತ್ತೀರಿ ಎಂದು ಪ್ರಶ್ನಿದರು.
ಚನ್ನಪಟ್ಟಣದ ಜನರ ಕಾಳಜಿ ನಾವು ಮಾಡುತ್ತೇವೆ
ರಾಮನಗರದಿಂದ ಕುಮಾರಸ್ವಾಮಿ ಶಾಸಕ, ಮುಖ್ಯಮಂತ್ರಿ, ಸಂಸದರಾಗಿದ್ದರು. ಅವರ ತಂದೆ ಅದೇ ಕ್ಷೇತ್ರದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದರು. ಅವರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ನಿಖಿಲ್ ಏಕೆ ಸೋಲುತ್ತಿದ್ದರು? ಇನ್ನೆಷ್ಟು ದಿನ ಈ ರಾಮನಗರ ಹಾಗೂ ಚನ್ನಪಟ್ಟಣ ಜನರಿಗೆ ಟೋಪಿ ಹಾಕಲು ಸಾಧ್ಯ ಎಂದರು.
ಕುಮಾರಸ್ವಾಮಿ ಅವರು ಈಗ ಮಂಡ್ಯಕ್ಕೆ ಹೋಗಿದ್ದಾರೆ. ನೀವು ಮಂಡ್ಯಕ್ಕೆ ಹೋಗಿ. ನಮ್ಮ ಅಭ್ಯಂತರವಿಲ್ಲ. ಚನ್ನಪಟ್ಟಣದ ಜನರ ಕಾಳಜಿ ನಾವು ಮಾಡುತ್ತೇವೆ ಎಂದು ಡಿಸಿಎಂ ನುಡಿದರು.
ಯೋಗೇಶ್ವರ್ ಎಲ್ಲಾ ಪಕ್ಷವನ್ನು ನೋಡಿದ್ದಾರೆ
ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಇದನ್ನು ಯೋಗೇಶ್ವರ್ ಅವರು ಅರಿತುಕೊಂಡು ಕಾಂಗ್ರೆಸ್ ಸರ್ಕಾರದ ಜತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಸೇರಿದರೆ ಮಾತ್ರ ಜನರಿಗೆ ಸಹಾಯ ಮಾಡಲು ಸಾಧ್ಯ ಎಂದು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಯೋಗೇಶ್ವರ್ ಎಲ್ಲಾ ಪಕ್ಷವನ್ನು ನೋಡಿದ್ದಾರೆ. ಬಿಜೆಪಿ ನೋಡಿದ್ದಾರೆ. ಜೆಡಿಎಸ್ ಜತೆಗಿನ ಮೈತ್ರಿ ನೋಡಿದ್ದಾರೆ. ಕೊನೆಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವೇ ಲೇಸು ಎಂದು ವಾಪಸ್ ಬಂದಿದ್ದಾರೆ ಎಂದರು.
ಕುಮಾರಸ್ವಾಮಿ ಕಾಸು, ಹಸ್ತಕ್ಕೆ ವೋಟ್
ಕೇವಲ ಯೋಗೇಶ್ವರ್ ಒಬ್ಬರೇ ಈ ಕ್ಷೇತ್ರದ ಜನರ ಸೇವೆ ಮಾಡುವುದಿಲ್ಲ. ನಾನು, ಸಿದ್ದರಾಮಯ್ಯ ಎಲ್ಲಾ ಸಚಿವರು ಹಾಗೂ ಮುಖಂಡರು ನಿಮ್ಮ ಸೇವೆ ಮಾಡುತ್ತೇವೆ. ಕುಮಾರಸ್ವಾಮಿ ದುಡ್ಡು ಕೊಡುತ್ತಾರಂತೆ.ಅವರ ದುಡ್ಡನ್ನು ನೀವು ಬೇಡ ಎನ್ನಬೇಡಿ. ಅವರ ಬಳಿ ಹಣ ಪಡೆಯಿರಿ, ಮತವನ್ನು ಹಸ್ತದ ಗುರುತಿಗೆ ಹಾಕಿ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಈ ಕೈ ಗುರುತಿಗೆ ನಿಮ್ಮ ಬೆಂಬಲ ನೀಡಿ ಎಂದರು.
ನಮ್ಮ ಚಟ್ಟ ಹೊರುವವರು ನೀವೇ !
ನಾವು ಈ ಜಿಲ್ಲೆಯವರು. ನಾವು ಸತ್ತರೆ ಇಲ್ಲೇಮಣ್ಣು ಮಾಡುತ್ತಾರೆ. ನಮ್ಮ ಪಲ್ಲಕ್ಕಿ ಹೊರುವವರು ನೀವೆ, ಚಟ್ಟ ಹೊರುವವರು ನೀವೇ. ಯೋಗೇಶ್ವರ್ ಸತ್ತರೆ ಅವರ ದೇಹವನ್ನು ಹಾಕುವುದು ಚಕ್ಕೆರೆಯಲ್ಲೇ. ಹೀಗಾಗಿ ನಾವು ಈ ಚನ್ನಪಟ್ಟಣದಲ್ಲಿ ಹೋರಾಡುತ್ತಿದ್ದೇವೆ ಎಂದರು.