

ತೀರ್ಥಹಳ್ಳಿ: ನಾನು ಬಿಜೆಪಿಯ ಬಂಡಾಯ ಅಭ್ಯರ್ಥಿ ಅಲ್ಲ. ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸಿರುವುದು ಬೇರೆಯವರನ್ನು ಸೋಲಿಸುವ ಉದ್ದೇಶದಿಂದಲ್ಲ ಎಂದು ವಿಧಾನಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್ ಹೇಳಿದರು.
ಈ ಚುನಾವಣೆ ಸರ್ಕಾರ ರಚನೆಗಾಗಿ ನಡೆಯುವಂಥದ್ದಲ್ಲ. ಪಕ್ಷದ ಚಿಹ್ನೆಯೂ ಬಳಕೆಯಾಗುತ್ತಿಲ್ಲ. ಹೀಗಾಗಿ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನೇ ಆಗಿದ್ದು. ಕಮಲದ ವಿರುದ್ಧ ಸ್ಪರ್ಧೆ ಮಾಡುತ್ತಿಲ್ಲ. ಪಕ್ಷದ ತೀರ್ಮಾನದಿಂದ ಭೌಗೋಳಿಕವಾಗಿ ಕರಾವಳಿ ಪ್ರಾತಿನಿಧ್ಯಕ್ಕೆ ಅನ್ಯಾಯವಾಗಿದೆ. ಹಿರಿಯರಾದ ಗಿರೀಶ್ ಪಟೇಲ್, ಎಸ್.ದತ್ತಾತ್ರಿ ಅವರಿಗೆ ಅವಕಾಶ ಸಿಕ್ಕಿದ್ದರೆ ವಿರೋಧ ಮಾಡುತ್ತಿರಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಡಾ. ಧನಂಜಯ ಸರ್ಜಿ ಇತ್ತೀಚೆಗೆ ಪಕ್ಷಕ್ಕೆ ಬಂದವರು. ಅವರಿಂದ ಪಕ್ಷಕ್ಕೆ ಯಾವ ಕೊಡುಗೆಯೂ ಇಲ್ಲ. ಸಾಲದ್ದಕ್ಕೆ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಘ ಪರಿವಾರದ ನಿಲುವಿಗೆ ವಿರುದ್ಧವಾಗಿ ಪ್ರಗತಿಪರರು, ಕಮ್ಯೂನಿಸ್ಟರ ಜತೆ ಸೇರಿ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರರ ರಾಜೀನಾಮೆಗೂ ಆಗ್ರಹಿಸಿದ್ದರು ಎಂದು ಆರೋಪಿಸಿದರು.
ನಾನು ಬಿಜೆಪಿ ನಿಷ್ಠಾವಂತ ಹಿರಿಯ ಕಾರ್ಯಕರ್ತ. ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿ 2-3 ದಿನಗಳವರೆಗೂ ಪಕ್ಷದ ಅಧಿಕೃತ ಅಭ್ಯರ್ಥಿ ಸರ್ಜಿ ಸೇರಿ ಪಕ್ಷದ ಯಾರೂ ನನ್ನನ್ನು ಸಂಪರ್ಕ ಮಾಡಲಿಲ್ಲ. ಅಂತಿಮವಾಗಿ ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ರಾಷ್ಟ್ರಭಕ್ತರ ಬಳಗದ ಬೆಂಬಲದಿಂದ ಆನೆ ಬಲ ಬಂದಂತಾಗಿದೆ ಎಂದರು. ಮದನ್, ಮೇಲಿನಕೊಪ್ಪ ಮಹೇಶ್, ಶೋಬಾನೆ ರಮೇಶ್, ಗಿರೀಶ್, ಎಂ.ಶಂಕರ್ ಇದ್ದರು.