

ರಾಯ್ಪುರ್(ಛತ್ತೀಸ್ಗಢ): ಮಹಿಳೆಯ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಟಿಸಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಛತ್ತೀಸ್ಗಢ ಪೊಲೀಸರು ತಮ್ಮ ಖೆಡ್ಡಾಗೆ ಕೆಡವಿದ್ದಾರೆ.
ಸ್ಥಳೀಯ ಮಾಧ್ಯಮ ಪ್ರಕಾರ ಆರೋಪಿ ರವಿ ಪೂಜಾರ್ ಎಂಬಾತ 'ನಿಶಾ ಜಿಂದಾಲ್' ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಹೊಂದಿದ್ದ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಪೂಜಾರ್ ನಕಲಿ ಖಾತೆಯನ್ನು ಬರೋಬ್ಬರಿ 10 ಸಾವಿರ ಮಂದಿ ಫಾಲೋ ಮಾಡುತ್ತಿದ್ದರು.
ಆರೋಪಿ ಬಗೆಗಿನ ಕುತೂಹಲಕಾರಿ ವಿಚಾರವೆಂದರೆ, ಆತ ಕಳೆದ 11 ವರ್ಷಗಳಿಂದ ಇಂಜಿನಿಯರಿಂಗ್ ಪರೀಕ್ಷೆಯನ್ನೇ ಪಾಸ್ ಮಾಡಿಲ್ಲ. ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಆರೋಪದಲ್ಲಿ ನಿಶಾ ಜಿಂದಾಲ್ರನ್ನು ಬಂಧಿಸಲು ಹೋಗಿದ್ದ ರಾಯ್ಪುರ್ಪೊಲೀಸರಿಗೆ ರವಿ ಪೂಜಾರ್ ಪತ್ತೆಯಾಗಿದ್ದಾನೆ. ಆ ಬಳಿಕವಷ್ಟೇ ಆತ ನಕಲಿ ಫೇಸ್ಬುಕ್ ಖಾತೆ ಹೊಂದಿದ್ದಾನೆ ಎಂಬ ಸತ್ಯಾಂಶ ತಿಳಿದಿದೆ.
ಇದೀಗ ಫೇಸ್ಬುಕ್ ಪೇಜ್ನಲ್ಲಿ ಅಧಿಕೃತ ಫೋಟೋ ಹಾಕಿ, ಫಾಲೋವರ್ಸ್ಗಳಿಗೆ ಸತ್ಯಾಂಶ ತಿಳಿಸುವಂತೆ ಆರೋಪಿ ರವಿ ಪೂಜಾರ್ಗೆ ಪೊಲೀಸರು ತಾಕೀತು ಮಾಡಿದ್ದಾರೆ. ಅದರಂತೆಯೇ ತನ್ನ ಫೋಟೋ ಹಾಕಿ ನಾನು ಪೊಲೀಸ್ ಕಸ್ಟಡಿಯಲ್ಲಿ ಇದ್ದೇನೆ ಎಂದು ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾನೆ.
ಈ ಬಗ್ಗೆ ಟ್ವೀಟ್ ಮಾಡಿರುವ ಛತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್ ಅವರು ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. ಯಾವುದೇ ವಂಚನೆಯು ಉಳಿಯಬಾರದು. ತಪ್ಪು ಸಂದೇಶ ಹರಡಿದವನಿಂದಲೇ ನಿಜಾಂಶ ಬಯಲಾಗಲಿ ಎನ್ನತ್ತಾ ಪೊಲೀಸರದ್ದು ಉತ್ತಮ ಕೆಲಸವೆಂದು ಮೆಚ್ಚಿದ್ದಾರೆ.
ಆರೋಪಿ ಪೂಜಾರ್ನನ್ನು ಐಪಿ ಮಾಹಿತಿಯ ಮೂಲಕ ಶುಕ್ರವಾರ ಬಂಧಿಸಲಾಗಿದ್ದು, ಆತನ ಮನೆಯಲ್ಲಿ ಲ್ಯಾಪ್ಟ್ಯಾಪ್ ಮತ್ತು ಮೊಬೈಲ್ ಫೋನ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)