ಲೆಕ್ಕದಲ್ಲಿ ನಾನು ಪಕ್ಕಾ; ಆಯವ್ಯಯ ಎಂದರೆ ನಿರ್ಜೀವ ಅಕ್ಷರಗಳ ಗಣಿತ ಅಲ್ಲ, ಅಂಕಿಅಂಶಗಳ ಕಸರತ್ತೂ ಅಲ್ಲ

CM Siddaramaiah
Published on

| ಸಿದ್ದರಾಮಯ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಇಂದು 2025-26ನೇ ಸಾಲಿನ ಕರ್ನಾಟಕದ ಆಯವ್ಯಯ ಮಂಡನೆಯಾಗಲಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ, ವಿತ್ತ ಸಚಿವನಾಗಿ ಬಜೆಟ್ ಮಂಡಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ನನ್ನ ಪಾಲಿಗೆ ಇದು ಹದಿನಾರನೆಯ ಬಜೆಟ್ ಮಂಡನೆ ಅವಕಾಶ. ಈ ರಾಜ್ಯದ ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ನನ್ನ ರಾಜಕೀಯ ಪಯಣದುದ್ದಕ್ಕೂ ವಿವಿಧ ಸಂದರ್ಭಗಳಲ್ಲಿ ನನ್ನ ಮೇಲೆ ಭರವಸೆ ಇರಿಸಿ ಹಣಕಾಸು ಸಚಿವನಾಗಿ ಬಜೆಟ್ ಮಂಡಿಸಲು ಅವಕಾಶ ಕಲ್ಪಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನೆಯುತ್ತೇನೆ. ನಾನು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದು 1994ರಲ್ಲಿ. ಅಂದಿಗೂ ಇಂದಿಗೂ ಇರುವ ವ್ಯತ್ಯಾಸ ಹಾಗೂ ಸಾಮ್ಯತೆಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅಂದು ಮೊದಲ ಬಾರಿಗೆ ಬಜೆಟ್ ಮಂಡಿಸುವಾಗ ನನಗೆ ನನ್ನ ಬಗ್ಗೆ ಅನುಮಾನವಿರಲಿಲ್ಲ ಆದರೆ, ಆರ್ಥಿಕ ವಿಷಯಗಳಲ್ಲಿ ಯಾವುದೇ ಶಾಸ್ತ್ರೀಯ ಅಧ್ಯಯನವಿಲ್ಲದ ಕಾರಣ ಅರ್ಥಶಾಸ್ತ್ರಜ್ಞರು, ವಿತ್ತೀಯ ನೀತಿನಿರೂಪಕರೆಲ್ಲ ಹೇಗೆ ನನ್ನ ಬಜೆಟ್ ಸ್ವೀಕರಿಸಬಹುದು ಎನ್ನುವ ಅಳುಕಿತ್ತು. ನಾನು ಹೊಸದಾಗಿ ಹಣಕಾಸು ಸಚಿವನಾದಾಗ ನನ್ನ ಸಾಮಾಜಿಕ ಹಿನ್ನೆಲೆಯನ್ನಿರಿಸಿಕೊಂಡು ಅನೇಕರು ಕುಹಕ, ವ್ಯಂಗ್ಯದ ಮಾತುಗಳನ್ನಾಡಿದ್ದರು. ನೂರು ಕುರಿಗಳನ್ನು ಲೆಕ್ಕ ಹಾಕಲಿಕ್ಕೆ ಬಾರದವನು ಏನು ಬಜೆಟ್ ಮಂಡಿಸುತ್ತಾನೆ? ಎಂದು ಕೆಲವರು ಬೆನ್ನ ಹಿಂದೆ ಟೀಕಿಸಿದ್ದರು. ಅವರೆಲ್ಲರಿಗೂ ಬಜೆಟ್ ಮೂಲಕವೇ ಉತ್ತರ ಹೇಳಬೇಕು ಎಂದು ನಿರ್ಧರಿಸಿಯೇ ನಾನು ನನ್ನ ಸಿದ್ಧತೆ ಆರಂಭಿಸಿದ್ದೆ.

ನಾನು ಆರ್ಥಿಕಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ತಜ್ಞ ಅಲ್ಲ. ಅನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೆ ಇಲ್ಲ. ರಾಜಕೀಯ ಕ್ಷೇತ್ರ ನನ್ನ ಪಾಲಿನ ಅನುಭವ ಮಂಟಪ. ನಾಲ್ಕು ದಶಕಗಳ ಕಾಲದ ಸುದೀರ್ಘ ರಾಜಕೀಯ ಜೀವನದಲ್ಲಿನ ಜನರೊಂದಿಗಿನ ಒಡನಾಟದ ಮೂಲಕ ಅವರಲ್ಲೊಬ್ಬನಾಗಿ ಗಳಿಸಿದ ಅನುಭವವೇ ನನ್ನನ್ನು ಆರ್ಥಿಕ ತಜ್ಞನನ್ನಾಗಿ ಮಾಡಿದೆ. ಕುರಿ ಕಾಯುವವ ಕುರಿಲೆಕ್ಕದಲ್ಲಿ ಎಂದೂ ತಪ್ಪುವುದಿಲ್ಲ. ಆಯವ್ಯಯ ಎಂದರೆ ನನ್ನ ಪಾಲಿಗೆ ನಿರ್ಜೀವ ಅಕ್ಷರಗಳ ಗಣಿತ ಅಲ್ಲ, ಅಂಕಿಅಂಶಗಳ ಕಸರತ್ತೂ ಅಲ್ಲ. ಸರಳವಾಗಿ ಹೇಳುವುದಾದರೆ ಅದು ಈ ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮನೆಯ ಲೆಕ್ಕ. ಅದು ನಮ್ಮ ಸಂವಿಧಾನದ ಆಶೋತ್ತರಗಳನ್ನು ಸಾಕಾರಗೊಳಿಸುವ ಮಂತ್ರ ದಂಡ ಎನ್ನುವುದನ್ನು ತಿಳಿದುಕೊಂಡೆ. ರಾಜ್ಯದ ಬೊಕ್ಕಸದಲ್ಲಿರುವುದು ಜನ ತೆರಿಗೆ ಮೂಲಕ ನೀಡಿರುವ ಬೆವರ ಗಳಿಕೆಯ ದುಡ್ಡು, ನಾನು ಅದನ್ನು ನಿರ್ವಹಿಸುವ ಟ್ರಸ್ಟಿ ಮಾತ್ರ. ಆ ಎಚ್ಚರಿಕೆ ನನ್ನಲ್ಲಿ ಸದಾ ಇದೆ. ರಾಜ್ಯದ ಪ್ರತಿಯೊಬ್ಬ ತೆರಿಗೆದಾರನಿಗೆ, ಅವನು ನೀಡುವ ಪ್ರತಿಯೊಂದು ಪೈಸೆ ತೆರಿಗೆಗೂ ಲೆಕ್ಕಪತ್ರ ಒಪ್ಪಿಸುವ ಉತ್ತರದಾಯಿತ್ವ ನನಗಿದೆ.

ಲೆಕ್ಕ ಕೇಳುವ ಹಕ್ಕು ರಾಜ್ಯದ ಜನತೆಗಿದೆ, ಆ ಹಕ್ಕನ್ನು ಗೌರವಿಸುವುದು ನನ್ನ ಧರ್ಮ. ಲೆಕ್ಕದಲ್ಲಿ ನಾನು ಪಕ್ಕಾ. ಆಯವ್ಯಯ ಪತ್ರವನ್ನು ರೂಪಿಸುವಾಗ ನನ್ನ ಮನಸ್ಸಿನಲ್ಲಿರುವುದು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜನಹಿತ ಕಾಳಜಿ. ನನ್ನ ಮೊದಲ ಬಜೆಟ್​ಗೇ ಅಂದು ಮಾಧ್ಯಮಗಳಿಂದ ಉತ್ತಮ ಸ್ಪಂದನೆ ದೊರೆಯಿತು. ಈಗಲೂ ನನಗೆ ನೆನಪಿದೆ, ನನ್ನ ಪ್ರಥಮ ಬಜೆಟ್ ಬಗ್ಗೆ ಅಂದು ‘ದಿ ಹಿಂದೂ’ ಪತ್ರಿಕೆಯು ವಾಸ್ತವದ ನೆಲೆಗಟ್ಟಿನಲ್ಲಿ ಮಂಡನೆಯಾದ ಬಜೆಟ್, ಪ್ರಾ್ಯಗ್ಮಾಟಿಕ್ ಬಜೆಟ್ ಎಂದಿತ್ತು. ಅಲ್ಲಿಂದ ಮುಂದೆ ನನ್ನಲ್ಲಿ ಯಾವುದೇ ಅಳುಕು ಉಳಿಯಲಿಲ್ಲ. ಇದುವೇ ಅಂದಿಗೂ ಇಂದಿಗೂ ಇರುವ ವ್ಯತ್ಯಾಸ.

ಈವರೆಗಿನ ನನ್ನ ಆಯವ್ಯಯಗಳನ್ನು ಗಮನಿಸಿದರೆ ಅದರ ಕೇಂದ್ರದಲ್ಲಿ ಜಾತಿ, ಧರ್ಮ, ಪ್ರದೇಶವನ್ನು ಮೀರಿದ ಸಾಮಾನ್ಯ ಮನುಷ್ಯನ ಹಿತಚಿಂತನೆಯೇ ಪ್ರಧಾನವಾಗಿ ಇರುವುದನ್ನು ಕಾಣಬಹುದು. ಬರಲಿರುವ ದಿನಗಳಲ್ಲಿ ನವ ಆಶೋತ್ತರಗಳನ್ನು ಸಾಕಾರಗೊಳಿಸುವ ಮೂಲಕ ನವ ಕರ್ನಾಟಕ ಕಟ್ಟುವ ಪ್ರಯತ್ನವನ್ನು ಈ ಬಾರಿಯ ಆಯವ್ಯಯ ಪತ್ರದಲ್ಲಿಯೂ ಮುಂದುವರಿಸಿದ್ದೇನೆ.

ಉಳಿದಂತೆ ಸಾಮ್ಯತೆಯ ಬಗ್ಗೆ ರ್ಚಚಿಸುವುದಾದರೆ, ಅಂದಿಗೂ ಇಂದಿಗೂ ನಾನು ವಿತ್ತ ಸಚಿವನಾಗಿ ಓರ್ವ ವಿದ್ಯಾರ್ಥಿಯ ರೀತಿಯೇ ನನ್ನ ತಯಾರಿ ಮಾಡಿಕೊಳ್ಳುತ್ತೇನೆ. ಇದು ನನ್ನ ಹದಿನಾರನೆಯ ಬಜೆಟ್ ಎಂದು ಹಗುರವಾಗಿ ಯಾವುದನ್ನೂ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬದಲಿಗೆ, ಇಷ್ಟು ಬಾರಿ ಬಜೆಟ್ ಮಂಡಿಸಿರುವುದರಿಂದ ಸಹಜವಾಗಿಯೇ ನನ್ನೆಡೆಗೆ ಹೆಚ್ಚು ನಿರೀಕ್ಷೆಗಳಿರುತ್ತವೆ, ಜವಾಬ್ದಾರಿಯೂ ದೊಡ್ಡದಿದೆ. ನಮ್ಮ ರಾಜ್ಯದ ಭವಿಷ್ಯದ ಹಿತಾಸಕ್ತಿಯನ್ನು, ಸಾಮಾನ್ಯ ಜನರ ಬದುಕು ಬವಣೆಗಳನ್ನು ಕೇಂದ್ರದಲ್ಲಿರಿಸಿಕೊಂಡು ವಿತ್ತೀಯ ಶಿಸ್ತು, ಚೌಕಟ್ಟಿನ ವಾಸ್ತವ ನೆಲೆಗಟ್ಟಿನಲ್ಲಿ ನುರಿತ ಅಧಿಕಾರಿಗಳ ತಂಡದೊಂದಿಗೆ ರ್ಚಚಿಸಿ, ವಿಶ್ಲೇಷಿಸಿ ಪ್ರತಿಯೊಂದು ಇಲಾಖೆಯ ಅಗತ್ಯಗಳನ್ನು ಮನಗಂಡು ಬಜೆಟ್ ಅನ್ನು ಈವರೆಗೆ ರೂಪಿಸುತ್ತ ಬಂದಿದ್ದೇನೆ. ಈ ಸಿದ್ಧತೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಲೇ ಬಂದಿದೆ.

ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಳೆರಡೂ ಜತೆ ಜತೆಯಲ್ಲೇ ಸಾಗುವ ಹಾದಿಯೇ ನನ್ನ ಬಜೆಟ್​ನ ಈವರೆಗಿನ ಆಂತರ್ಯವಾಗಿದೆ. ನಾಡಿನ ಸಮಗ್ರ ಬೆಳವಣಿಗೆಗೆ ಕಾರಣವಾಗುವ ಕೃಷಿ, ನೀರಾವರಿ, ಕೈಗಾರಿಕೆ, ಮೂಲಸೌಕರ್ಯ, ವಿಜ್ಞಾನ-ತಂತ್ರಜ್ಞಾನ ಮುಂತಾದ ವಲಯಗಳ ದೂರಗಾಮಿ ಯೋಜನೆಗಳನ್ನು ಸಾಕಾರಗೊಳಿಸುವುದು ಹಾಗೂ ಅದೇ ರೀತಿ ಎಲ್ಲರನ್ನೂ ಒಳಗೊಳ್ಳುವ, ಮಾನವಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳಂತಹ ನವೀನ ಕ್ರಮಗಳ ಮೂಲಕ ಶೋಷಿತರು, ದಮನಿತರು ಹಾಗೂ ಶ್ರೀಸಾಮಾನ್ಯರ ಹಿತಾಸಕ್ತಿಯನ್ನು ಕಾಯುವುದು - ಈ ತಕ್ಕಡಿಯನ್ನು ಸಮಚಿತ್ತದಿಂದ ಸಮತೂಕದಿಂದ ವಿತ್ತೀಯ ಶಿಸ್ತಿನೊಳಗೆ ಮಾಡುವ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ. ಈ ಬಾರಿಯೂ ನನ್ನ ಈ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ವಿಶ್ವಾಸದಿಂದ, ನನ್ನ ಸಿದ್ಧತೆಯ ಬಗೆಗಿನ ಆತ್ಮವಿಶ್ವಾಸದಿಂದ ಬಜೆಟ್ ಮಂಡಿಸುತ್ತಿದ್ದೇನೆ. ನಿಮ್ಮ ಹಾರೈಕೆಗಳು ನನ್ನ ಬೆನ್ನಿಗಿರಲಿ, ರಚನಾತ್ಮಕ ವಿಮರ್ಶೆಗಳು ನನ್ನ ಮುಂದಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net