

ಅರಕಲಗೂಡು: ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ಚುನಾವಣೆಯಲ್ಲಿ ಮತದಾರರು ನನಗೆ ಆಶೀರ್ವದಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಂ.ಟಿ.ಕೃಷ್ಣೇಗೌಡ ಮನವಿ ಮಾಡಿದರು.
ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಎಂ.ಟಿ. ಕೃಷ್ಣೇಗೌಡರ ಜನ್ಮದಿನದ ಅಂಗವಾಗಿ ಎಂ.ಟಿ. ಕೃಷ್ಣೇಗೌಡರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬದಲಾವಣೆ ದೃಷ್ಟಿಯಿಂದ ಮತದಾರರು ನನಗೆ ಬೆಂಬಲ ನೀಡಿ ಅಭಿವೃದ್ಧಿ ಪರ ರಾಜಕಾರಣಕ್ಕೆ ಕೈಜೋಡಿಸಬೇಕು. ಜನರು ನನ್ನ ಮೇಲೆ ಹೊಂದಿರುವ ಅಭಿಮಾನಕ್ಕೆ ಸದಾ ಋಣಿಯಾಗಿರುವುದಾಗಿ ತಿಳಿಸಿದರು.
ವಿಜ್ಞಾನಿ ಡಾ. ಕೋಮಲ್‌ಕುಮಾರ್ ಮಾತನಾಡಿ, ವಿದೇಶದಲ್ಲಿ ಕ್ಯಾನ್ಸರ್ ತಡೆಗೆ ಶಾಶ್ವತ ಲಸಿಕೆ ಹಾಗೂ ಜ್ವರ ಬ್ಯಾಕ್ಟೀರಿಯಾ ಇಲ್ಲವೇ ವೈರಸ್‌ನಿಂದ ಬರುತ್ತದೆಯೇ ಎಂಬುದರ ಕುರಿತು ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಯಲ್ಲಿ ನಮ್ಮ ತಂಡ ಯಶಸ್ಸು ಸಾಧಿಸಿದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಚನ್ನಕೇಶವ ಮಾತನಾಡಿ, ಕೆಳ ಸಮುದಾಯವನ್ನು ಮೇಲೆತ್ತುವಲ್ಲಿ ಕೃಷ್ಣೇಗೌಡರ ಶ್ರಮ ಬಹಳಷ್ಟಿದೆ. ನನ್ನನ್ನು ಓದಿಸಿ ಕೆಎಎಸ್ ಮಾಡಿಸಲು ಶ್ರಮಿಸಿದ ಕೃಷ್ಣೇಗೌಡರು ನನಗೆ ದೈವದ ಸ್ವರೂಪ. ಜನಕಲ್ಯಾಣಕ್ಕಾಗಿ ತುಡಿತ ಹೊಂದಿರುವ ಇಂತಹ ಮಹಾನ್ ವ್ಯಕ್ತಿಗಳು ರಾಜಕೀಯವಾಗಿ ಏಳಿಗೆ ಕಾಣಬೇಕು ಎಂದು ಹೇಳಿದರು.
ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಿ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿ, ಗೌರವಿಸಲಾಯಿತು.