

ಕಮಲ್ ಹಾಸನ್ ಅವರ ಹೇಳಿಕೆ ವಿಚಾರ ನ್ಯಾಯಾಲಯ ಮೆಟ್ಟಿಲೇರಿದ್ದು, ಅದರ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಇದಕ್ಕೆ ನನ್ನ ಸಹಮತವಿದೆ. ಕಮಲ್ ಹಾಸನ್ ಅವರು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು DK ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತಾನಾಡಿದರು. ನ್ಯಾಯಾಲಯ ಎಲ್ಲರನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಹಿತ, ಭಾಷೆ ಕಾಪಾಡಲು ತನ್ನ ಅಭಿಪ್ರಾಯ ತಿಳಿಸಿರುತ್ತದೆ. ಈ ವಿವಾದದ ಬಗ್ಗೆ ಸಾಹಿತಿಗಳು ಹಾಗೂ ತಜ್ಞರ ಜತೆ ಚರ್ಚೆ ಮಾಡಿದೆ. ಆಗ ನನಗೆ ತಿಳಿದಿದ್ದು, ನಾವು ದ್ರಾವಿಡ ಭಾಗಕ್ಕೆ ಸೇರಿದವರು. ಇಲ್ಲಿ ಮೇಲು ಕೀಳು ಎಂಬ ಬೇಧವಿಲ್ಲ. ನಮ್ಮ ಭಾಷೆಗಳು ಒಂದರ ಜೊತೆ ಮತ್ತೊಂದು ತನ್ನದೇ ಆದ ರೀತಿಯಲ್ಲಿ ಬೆಸೆದುಕೊಂಡಿವೆ. ಕಮಲ್ ಹಾಸನ್ ಅವರು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಡಿಎಂಕೆ ಮಿತ್ರಪಕ್ಷ ಆಗಿರುವ ಕಾರಣ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಮಲ್ ಹಾಸನ್ ವಿಚಾರದಲ್ಲಿ ಮೃದುಧೋರಣೆ ತಾಳಿದ್ದಾರೆ ಎಂಬ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಜಾತಿ, ಭಾಷೆ, ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತದೆಯೇ? ಬಿಜೆಪಿಯವರು ಸಮಾಜವನ್ನು ಒಡೆದು ಆಳುವವರು. ನಾವು ಸಮಾಜವನ್ನು ಒಂದುಗೂಡಿಸಿ ಆಡಳಿತ ಮಾಡುವವರು. ಕಬ್ಬಿಣದಿಂದ ಕತ್ತರಿ ಹಾಗೂ ಸೂಜಿ ಎರಡೂ ತಯಾರಾಗುತ್ತದೆ. ಬಿಜೆಪಿ ಕತ್ತರಿಯಾದರೆ, ಕಾಂಗ್ರೆಸ್ ಸೂಜಿಯಾಗಿದೆ. ನಿತ್ಯ ಸುಮಾರು 50 ಸಾವಿರ ನಮ್ಮ ಜನ ಹೊಸೂರಿಗೆ ಹೋಗುತ್ತಾರೆ. ಅಲ್ಲಿರುವವರು ಇಲ್ಲಿ ವಾಸ ಮಾಡುತ್ತಿದ್ದಾರೆ. ಏನಾದರೂ ಹೆಚ್ಚುಕಮ್ಮಿಯಾದರೆ ಇವರ ಜವಾಬ್ದಾರಿ ಹೊರುವವರು ಯಾರು? ಕಮಲ್ ಅವರು ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತಾರೆ. ಆದರೆ ಅದನ್ನು ಇಟ್ಟುಕೊಂಡು ಎಲ್ಲೆಲ್ಲಿಗೋ ವಿಚಾರಗಳನ್ನು ತೆಗೆದುಕೊಂಡು ಹೋಗಬಾರದು. ನ್ಯಾಯಾಲಯದಲ್ಲಿ ಈ ವಿವಾದಕ್ಕೆ ಒಂದು ಪರಿಹಾರ ಸಿಕ್ಕಿದೆ. ನ್ಯಾಯಾಲಕ್ಕೆ ಗೌರವಿಸಿ ಕ್ಷಮೆ ಕೇಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಈ ವಿಚಾರವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಕಾನೂನು ಕೈಗೆ ತೆಗೆದುಕೊಳ್ಳುವುದು, ಚಿತ್ರ ಮಂದಿರಗಳ ಮುಂದೆ ಗಲಾಟೆ ಮಾಡುವುದು ಬೇಡ ಎಂದು ಕನ್ನಡ ಸಂಘಟನೆಗಳಿಗೆ ಮನವಿ ಮಾಡುತ್ತೇನೆ" ಎಂದು ತಿಳಿಸಿದರು.
"ಈ ಬಾರಿಯ ಐಪಿಎಲ್ ಟೂರ್ನಿಯನ್ನು ನಮ್ಮ ಆರ್ ಸಿಬಿ ತಂಡ ಗೆಲ್ಲಬೇಕು ಎಂದು ರಾಜ್ಯ ಹಾಗೂ ದೇಶದ ಅಭಿಮಾನಿಗಳು ಬಯಸುತ್ತಿದ್ದಾರೆ. ರಾಜ್ಯದ ಜನರ ಪರವಾಗಿ ಆರ್ ಸಿಬಿ ತಂಡದ ಆಟಗಾರರಿಗೆ ಶುಭಕೋರುತ್ತೇನೆ. ಈ ಬಾರಿ ಐಪಿಎಲ್ ಕಪ್ ಅನ್ನು ಗೆದ್ದು ತರಬೇಕು. ಫೈನಲ್ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಆಟಗಾರರು ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಲಿ ಎಂದು ಶುಭ ಹಾರೈಸುತ್ತೇನೆ" ಎಂದು ತಿಳಿಸಿದರು.