

ತೆಲಂಗಾಣ: ಪೊಲೀಸರು ಕರೊನಾ ಲಾಕ್ಡೌನ್ ವೇಳೆ ತಮ್ಮ ಕರ್ತವ್ಯ ಮಾಡುವುದರ ಜತೆ, ಲಾಕ್ಡೌನ್ನಿಂದ ಹೊಟ್ಟೆಬಟ್ಟೆಗಿಲ್ಲದೆ, ಕಷ್ಟಪಡುತ್ತಿರುವವರಿಗೂ ಸಹಾಯ ಮಾಡುತ್ತಿದ್ದಾರೆ. ಕೆಲಸವಿಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ ಹಸಿವಿನಿಂದ ಕಂಗಾಲಾದ ಎಷ್ಟೋ ಜನರಿಗೆ ಪೊಲೀಸರು ಊಟ ನೀಡುತ್ತಿದ್ದಾರೆ.
ಈ ಮಧ್ಯೆ ತೆಲಂಗಾಣದ ರಾಚಕೊಂಡ ಪೊಲೀಸ್ ಕಮಿಷನರೇಟ್ ಕಚೇರಿ ಸುಮಾರು 41 ವೃದ್ಧಾಶ್ರಮಗಳು, ಅನಾಥಾಶ್ರಮಗಳು ಮತ್ತು ಅಂಗವಿಕಲರ ಆಶ್ರಯತಾಣಗಳನ್ನು ದತ್ತುಪಡೆದು, ಲಾಕ್ಡೌನ್ ಸಂದರ್ಭದಲ್ಲಿ ಅವರಿಗೆ ಊಟ ಮತ್ತಿತರ ಅಗತ್ಯಗಳನ್ನು ಪೂರೈಕೆ ಮಾಡುತ್ತಿದೆ.
ಪೊಲೀಸ್ ಕಮಿಷನರೇಟ್ ಕಚೇರಿ ದತ್ತುಪಡೆದ ಎಲ್ಲ ವೃದ್ಧಾಶ್ರಮ, ಅನಾಥಾಶ್ರಮ, ಅಂಗವಿಕಲರ ಆಶ್ರಯ ತಾಣಗಳಿಗೆ ಎಲ್ಲ ರೀತಿಯ ರೇಷನ್, ಅಲ್ಲಿನವರಿಗೆ ಬೇಕಾದ ಅಗತ್ಯ ವಸ್ತುಗಳು, ಔಷಧಗಳನ್ನು ಒದಗಿಸುತ್ತಿದೆ. ಪೊಲೀಸರ ಈ ಒಳ್ಳೆಯ ಕಾರ್ಯಕ್ಕೆ ಕೆಲವು ಎನ್ಜಿಒಗಳೂ ಕೈ ಜೋಡಿಸಿವೆ.
ಲಾಕ್ಡೌನ್ ಇರುವುದರಿಂದ ಜನರಿಗೆ ಹೊರಗಡೆ ಹೋಗಲು ಆಗುತ್ತಿಲ್ಲ. ಅದರಲ್ಲೂ ವೃದ್ಧರು, ಅಂಗವಿಕಲರು ಮತ್ತೂ ಕಷ್ಟಪಡುವಂತಾಗಿದೆ. ವೃದ್ಧಾಶ್ರಮಗಳು, ಅನಾಥಾಲಯಗಳನ್ನು ನಡೆಸುವವರಿಗೂ ಅಗತ್ಯ ವಸ್ತುಗಳ ಸಂಗ್ರಹ ಕಷ್ಟವಾಗುತ್ತಿದೆ. ಹಾಗಾಗಿ ನಾವು ದತ್ತು ಪಡೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)