ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ರೈಲಿನಿಂದ ಜಿಗಿದ ಮಹಿಳೆ; ಸಂತ್ರಸ್ತೆ ಪೊಲೀಸರಿಗೆ ಹೇಳಿದಿಷ್ಟು.. | Sexual Assault

Untitled design (61)
Published on

ಹೈದರಾಬಾದ್​: ಲೈಂಗಿಕ ಕಿರುಕುಳದಿಂದ(Sexual Assault) ತಪ್ಪಿಸಿಕೊಳ್ಳಲು 23 ವರ್ಷದ ಮಹಿಳೆ ಚಲಿಸುವ ರೈಲಿನಿಂದ ಹಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಸಿಕಂದರಾಬಾದ್‌ನಿಂದ ಮೆಡ್ಚಲ್‌ಗೆ ಹೋಗುತ್ತಿದ್ದ ಎಂಎಂಟಿಎಸ್ (ಮಲ್ಟಿ ಮಾಡಲ್ ಟ್ರಾನ್ಸ್‌ಪೋರ್ಟ್ ಸರ್ವಿಸ್) ರೈಲಿನಲ್ಲಿ ಶನಿವಾರ ಈ ಘಟನೆ ನಡೆದಿರುವುದಾಗಿ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸೋಮವಾರ(ಮಾರ್ಚ್​​ 24) ಮಾಹಿತಿಯನ್ನು ನೀಡಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಜಿಆರ್‌ಪಿ ತಿಳಿಸಿದೆ.

ಮಾರ್ಚ್ 22ರ ಸಂಜೆ ರೈಲಿನ ಮಹಿಳಾ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದೆ. ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತಿಬ್ಬರು ಮಹಿಳಾ ಪ್ರಯಾಣಿಕರು ಅಲ್ವಾಲ್ ರೈಲು ನಿಲ್ದಾಣದಲ್ಲಿ ಇಳಿದರು. ಆ ಸಮಯದಲ್ಲಿ ಬೋಗಿಯಲ್ಲಿ ಒಬ್ಬಂಟಿಯಾಗಿ ಉಳಿದಿದ್ದೆ. ಸುಮಾರು 25 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಬಳಿಗೆ ಬಂದು ಲೈಂಗಿಕತೆಗೆ ಒತ್ತಾಯಿಸಿದನು ಎಂದು ಸಂತ್ರಸ್ತೆ ಸರ್ಕಾರಿ ರೈಲ್ವೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆತನನ್ನು ಮಹಿಳೆ ವಿರೋಧಿಸಿದಾಗ, ಆರೋಪಿ ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಲು ಯತ್ನಿಸಿದನು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಆಕೆ ಚಲಿಸುವ ರೈಲಿನಿಂದ ಹಾರಿದ್ದಾರೆ. ಮಹಿಳೆಯ ತಲೆ, ಗಲ್ಲ, ಬಲಗೈ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು, ನಿಲ್ದಾಣದಲ್ಲಿ ದಾರಿಹೋಕರು ಸಂತ್ರಸ್ತೆಯನ್ನು ಗಮನಿಸಿ ಕೆಲವು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಜಿಆರ್‌ಪಿ ತಿಳಿಸಿದೆ. ಆ ವ್ಯಕ್ತಿಯನ್ನು ಮತ್ತೆ ನೋಡಿದರೆ ಅವನನ್ನು ಗುರುತಿಸಬಹುದು ಎಂದು ಸಂತ್ರಸ್ತೆಯು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಖಾಸಗಿ ವಲಯದ ಉದ್ಯೋಗಿಯಾಗಿರುವ ಮಹಿಳೆ, ತನ್ನ ಮೊಬೈಲ್ ಫೋನ್ ಡಿಸ್ಪ್ಲೇ ಸರಿಪಡಿಸಲು ಮೆಡ್ಚಲ್​ ನಿಂದ ಸಿಕಂದರಾಬಾದ್​​​​ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಬಿಎನ್‌ಸಿ) ಸೆಕ್ಷನ್ 75 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ) ಮತ್ತು ಸೆಕ್ಷನ್ 131 (ಬಲಪ್ರಯೋಗ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net