

ಹೈದರಾಬಾದ್: ಗೀತಾ ಕ್ಲಿನಿಕ್ ಎಂಬ ಹೆಸರಿನಲ್ಲಿ ಪೈಲ್ಸ್ಗೆ ಚಿಕಿತ್ಸೆ ನಡೆಸುತ್ತಿದ್ದ ನಕಲಿ ವೈದ್ಯನನ್ನು ಹೈದರಾಬಾದ್‌ನಲ್ಲಿರುವ ಉತ್ತರ ವಲಯ ಆಯುಕ್ತರ ಕಾರ್ಯಪಡೆ ಬಂಧಿಸಿದೆ.
ತುಹಿನ್ ಕುಮಾರ್ ಮಂಡಲ್ (30) ಬಂಧಿತ ವ್ಯಕ್ತಿ. ಈ ನಕಲಿ ವೈದ್ಯನನ್ನು ಹೈದರಾಬಾದ್‌ನ ತುಕಾರಾಂಗೇಟ್‌ನ ಮೀನಾ ಆಸ್ಪತ್ರೆ ಪಕ್ಕದಲ್ಲಿ ಬಂಧಿಸಲಾಗಿದೆ. ಗೀತಾ ಕ್ಲಿನಿಕ್ ಎಂಬ ಹೆಸರಿನಲ್ಲಿ ಪೈಲ್ಸ್ಗೆ ಚಿಕಿತ್ಸೆ ನಡೆಸುತ್ತಿದ್ದನು. ಡಾ.ಟಿ.ಕೆ.ಮಂಡಲ್ ಹೆಸರಿನಲ್ಲಿ ವಿಸಿಟಿಂಗ್ ಕಾರ್ಡ್ ಗಳನ್ನೂ ನೀಡಿದ್ದಾನೆ. ಪೊಲೀಸರು ದಾಳಿ ನಡೆಸಿ ಕ್ಲಿನಿಕ್‌ನಿಂದ ಮುಲಾಮುಗಳು, ಮಾತ್ರೆಗಳು ಮತ್ತು ಪೈಲ್ಸ್ ಚಿಕಿತ್ಸಾ ಸಾಧನಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದ ನಂತರ ಬೆಚ್ಚಿ ಬಿಳಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ.
ತುಹಿನ್ ಕುಮಾರ್ ವೈದ್ಯಕೀಯ ವಿದ್ಯಾರ್ಹತೆ ಏನು ಎಂದು ಕೇಳಿದಾಗ ವೈದ್ಯರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದರಿಂದ ಎಲ್ಲವೂ ಗೊತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾನೆ. ಈತ ಓದಿದ್ದು 10ನೇ ತರಗತಿ. 2012 ರಲ್ಲಿ, ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಮದನಪಲ್ಲಿಗೆ ತೆರಳಿ ಡಾ. ಬಿಸ್ವಾಸ್ ಅವರ ಬಳಿ ಸಹಾಯಕನಾಗಿ ಸೇರಿಕೊಂಡು, ಅಲ್ಲಿ ಪೈಲ್ಸ್ ಚಿಕಿತ್ಸೆಯನ್ನು ಕಲಿತನು. 2016ರಲ್ಲಿ ಹೈದರಾಬಾದಿಗೆ ಬಂದು ‘ಗೀತಾ ಕ್ಲಿನಿಕ್’ ಹೆಸರಿನ ಪೈಲ್ಸ್ ಚಿಕಿತ್ಸಾ ಕ್ಲಿನಿಕ್ ಆರಂಭಿಸಿದ್ದನು. ರೋಗ ಮರುಕಳಿಸದಂತೆ ಚಿಕಿತ್ಸೆ ನೀಡುವುದು ನನ್ನ ವಿಶೇಷತೆ ಎಂದು ಪ್ರಚಾರ ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದನು. ಆದರೆ ಇವನ ಬಳಿ ಯಾವುದೇ ಅರ್ಹ ಪ್ರಮಾಣಪತ್ರವನ್ನು ಹೊಂದದೆ ರೋಗಿಗಳಿಗೆ ಮೋಸ ಮಾಡುತ್ತಿದ್ದನು. ನಂತರ ಈ ಪ್ರಕರಣದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಕಲಿ ವೈದ್ಯನನ್ನು ಬಂಧಿಸಿದ್ದಾರೆ.
ಪೈಲ್ಸ್‌ನಂತಹ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಕಷ್ಟಪಡುತ್ತಾರೆ ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಸರಿಯಾದ ಜ್ಞಾನದ ಕೊರತೆಯು ಇಂತಹ ನಕಲಿ ವೈದ್ಯರಿಗೆ ಅವಕಾಶವಾಗುತ್ತದೆ.ಇವರ ಬಗ್ಗೆ ಎಚ್ಚರದಿಂದ ಇರಲು ಪೊಲೀಸರು ಸೂಚಿಸಿದ್ದಾರೆ.