Huge Fraud : 229 ಕೋಟಿ ರೂ.ಗಳ ಭಾರೀ ವಂಚನೆ.. ಹೇಗಾಯ್ತು ಗೊತ್ತಾ?

Huge Fraud
Published on

ಹೈದರಾಬಾದ್: ಹೂಡಿಕೆ ಮಾಡಿದ 2ವರ್ಷದಲ್ಲೇ ಶೇ.100ರಷ್ಟು ಲಾಭ ಅಂದರೆ 1ಲಕ್ಷಕ್ಕೆ 1ಲಕ್ಷ ಸೇರಿಸಿ 2 ಲಕ್ಷ ರೂ. ನೀಡುವುದಾಗಿ ನಂಬಿಸಿ 229 ಕೋಟಿ ರೂ.ವಂಚಿಸಿದ(Huge Fraud ) ನಕಲಿ ಕಂಪನಿಗೆ ಬೀಗ ಜಡಿದಿರುವ ಹೈದರಾಬಾದ್​ ಪೊಲೀಸರು ಇದರ ಮಾಲೀಕರಾದ ಪತಿ, ಪತ್ನಿಯನ್ನು ಬಂಧಿಸಿದ್ದಾರೆ.

ಒಂದು ಲಕ್ಷ ಹೂಡಿಕೆ ಮಾಡಿದರೆ ಮೂರು ತಿಂಗಳಲ್ಲಿ ಶೇ.15 ಲಾಭ ಸೇರಿಸಿ 1.15 ಲಕ್ಷ ರೂ ಕೊಡ್ತೇವೆ. ಸುವರ್ಣ ಯೋಜನೆಯಡಿ ಆರು ತಿಂಗಳೊಳಗೆ 1.25 ಲಕ್ಷ ರೂ., ಪ್ಲಾಟಿನಂ ಯೋಜನೆಯಡಿ 12 ತಿಂಗಳಿಗೆ ಶೇ.60 ಲಾಭ ಮತ್ತು 1.60 ಲಕ್ಷ ರೂ., 24 ತಿಂಗಳ ಕಾಲ ಕಕ್ಷೆ ಯೋಜನೆಯಡಿ ದುಪ್ಪಟ್ಟು ಹಣ ಅಂದರೆ ಕೇವಲ 2ವರ್ಷದಲ್ಲಿ 2 ಲಕ್ಷ(ಶೇ.100) ಲಾಭ ನೀಡುತ್ತೇವೆ’ ಎಂದು ನಂಬಿಸಿ ಸುಮಾರು 17,500 ಜನರನ್ನು ವಂಚಿಸಿ 229 ಕೋಟಿ ರೂಪಾಯಿ ಲೂಟಿ ಮಾಡಿದ್ದ ಕ್ರಿಮಿನಲ್‌ಗಳನ್ನು ಹೈದರಾಬಾದ್​ನ ಸಿಸಿಎಸ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಡಿಕೆಝಡ್ ಟೆಕ್ನಾಲಜೀಸ್ ಹೆಸರಿನಲ್ಲಿ ತೆರೆಯಲಾಗಿದ್ದ ಕಂಪನಿ ಈ ತರದ ಸುಳ್ಳು ಆಶ್ವಾಸನೆಗಳನ್ನು ನೀಡಿ 229 ಕೋಟಿ ರೂ.ಲೂಟಿ ಮಾಡಿದೆ. ಇದರ ನಿರ್ದೇಶಕ ಅಶ್ವಕ್ ರಹೀಲ್, ಆತನ ಪತ್ನಿ ಸೈಯದಾ ಆಯೆಶಾನಾಜ್ ರನ್ನು ಬಂಧಿಸಲಾಗಿದೆ ಎಂದು ಸಿಸಿಎಸ್ ಡಿಸಿಪಿ ಶ್ವೇತಾ ತಿಳಿಸಿದ್ದಾರೆ.

ಈ ಕಂಪನಿ ಅರ್ಲಿ ಫ್ರೆಶ್ ಸ್ಟೋರ್, ಹೆಡ್‌ಸೆಟ್‌ಗಳು, ನೆಕ್‌ಬ್ಯಾಂಡ್ ಕಂಪನಿ ಬೋಲ್ಟ್ ಮತ್ತು ಅಮೆಜಾನ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ಬಿಟುಬಿ (ಬಿಸಿನೆಸ್ ಟು ಬಿಸಿನೆಸ್) ಮತ್ತು ಬಿ ಟು ಸಿ (ಬ್ಯುಸಿನೆಸ್ ಟು ಕಸ್ಟಮರ್) ವ್ಯಾಪಾರ ಶುರು ಮಾಡಿತ್ತು. ಅಮೆಜಾನ್‌ನಿಂದ ದಿನಕ್ಕೆ 4ಸಾವಿರ ಆರ್ಡರ್‌ಗಳು ಬರುತ್ತವೆ ಎಂದು ಪ್ರಚಾರ ಮಾಡಲಾಗಿತ್ತು. ವ್ಯಾಪಾರ ವೃದ್ಧಿಗೆ ವಿಶೇಷ ಏಜೆಂಟರನ್ನು ನೇಮಿಸಿಕೊಂಡು, ಸಾಮಾಜಿಕ ಮಾಧ್ಯಮ ಮತ್ತು ಯೂಟ್ಯೂಬ್‌ನಲ್ಲಿ ಭಾರಿ ಪ್ರಚಾರ ಮಾಡಲಾಗಿತ್ತು. ತಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಆರಂಭದಲ್ಲಿ ಶೇ.8ರಿಂದ 12ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರವಾದ ವಿಡಿಯೋಗಳಿಂದ ಆಕರ್ಷಿತರಾದ ಜನರು 5ಸಾವಿರ ರೂಗಳಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ್ದರು. ಅದರಂತೆ ಡಾ.ಅಬ್ದುಲ್ ಜೈಶ್ ಎಂಬಾತ ತಾನು ಹೂಡಿಕೆ ಮಾಡಿದ್ದ ಹಣ ವಾಪಸ್​ ಬಾರದಿದ್ದಾಗ ತಾನು ಮೋಸ ಹೋಗಿರುವುದನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಬಳಿಕ ಸಿಸಿಎಸ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಸಿಸಿಎಸ್ ಪೊಲೀಸರು ವಂಚಕ ಕಂಪನಿ ಕಚೇರಿಗೆ ದಾಳಿ ನಡೆಸಿ ಶೋಧ ನಡೆಸಿದ್ದು, ಈ ವೇಳೆ 564 ಒರಿಜಿನಲ್ ಪ್ರೊಕ್ಯೂರ್‌ಮೆಂಟ್ ಗ್ಯಾರಂಟಿ ಅಗ್ರಿಮೆಂಟ್ ಬಾಂಡ್‌ಗಳು, ಡಿಕೇಜ್ಡ್ ಟೆಕ್ನಾಲಜೀಸ್ ಲಾಂಛನವಿರುವ 5 ಬಂಡಲ್‌ಗಳ ಲೆಟರ್‌ಹೆಡ್‌ಗಳು, ವಿವಿಧ ಗ್ರಾಹಕರ ಹೆಸರಿನಲ್ಲಿ ಚೆಕ್‌ಬುಕ್‌ಗಳು, 13 ಲ್ಯಾಪ್‌ಟಾಪ್‌ಗಳು ಮತ್ತು ರೂ.1.70 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಒಟ್ಟು 17,500 ಮಂದಿಯಿಂದ 229 ಕೋಟಿ ರೂಪಾಯಿಗಳ ಹೂಡಿಕೆಯನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಪತ್ತೆಹಚ್ಚಿದ್ದಾರೆ.

ಹಣಕಾಸು ವಂಚನೆ ಜತೆಗೆ ತೆಲಂಗಾಣ ಪ್ರೊಟೆಕ್ಷನ್ ಆಫ್ ಡಿಪಾಸಿಟರ್ಸ್ ಆಫ್ ಫೈನಾನ್ಷಿಯಲ್ ಆಕ್ಟ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net