ಹೈಬ್ರೀಡ್ ಜೋಳಕ್ಕೆ ಬಹುಬೇಡಿಕೆ

spt 21 kottur 01
ಕೊಟ್ಟೂರು ಎಪಿಎಂಸಿಯಲ್ಲಿ ಮಾರಾಟಕ್ಕೆ ಬಂದಿರುವ ಹೈಬ್ರೀಡ್ ಜೋಳದ ರಾಶಿ.
Published on

ಕೊಟ್ಟೂರು: ರೋಹಿಣಿ ಮಳೆ ಬಂದ್ರೆ, ಓಣಿ ತುಂಬೆಲ್ಲ ಜೋಳ ಎಂಬ ನಾಣ್ನುಡಿಯಂತೆ ಕೊಟ್ಟೂರು ಎಪಿಎಂಸಿಗೆ ಕಳೆದ 20 ದಿನಗಳಲ್ಲಿ ಸುಮಾರು 50 ಸಾವಿರ ಕ್ವಿಂಟಾಲ್ ಹೈಬ್ರೀಡ್ ಜೋಳ ಮಾರಾಟವಾಗಿದೆ.

ಹೈಬ್ರೀಡ್ ಜೋಳದ ಸೀಸನ್ ಮುಗಿಯುವುದರೊಳಗೆ ಲಕ್ಷ ಕ್ವಿಂಟಾಲ್ ಹೈಬ್ರೀಡ್ ಜೋಳ ಇಲ್ಲಿನ ಎಪಿಎಂಸಿಯಲ್ಲಿ ಮಾರಾಟವಾಗುವ ಸಾಧ್ಯತೆ ಇದ್ದು, ಹೊಸ ದಾಖಲೆ ಸೃಷ್ಟಿಸಲಿದೆ.

ಕಳೆದ 20 ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಹೈಬ್ರೀಡ್ ಜೋಳ ಮಾರಾಟಕ್ಕೆ ಬಂದಿರುವುದು ಇದೇ ಮೊದಲು. ಹೈಬ್ರೀಡ್ ಜೋಳ ಮಾರಾಟದಲ್ಲಿ ಕೊಟ್ಟೂರು ಎಪಿಎಂಸಿ ವಿಜಯನಗರ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರಸ್ತುತ ಹೈಬ್ರೀಡ್ ಜೋಳ ಒಂದು ಕ್ವಿಂಟಾಲ್‌ಗೆ 1900 ರೂ. ಯಿಂದ 2400 ರೂ. ಬೆಲೆ ಇದೆ. ಕಳೆದ ವರ್ಷ 3500 ಬೆಲೆ ಇತ್ತು.

ಬ್ರಿಟಿಷರ ಕಾಲದಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿದ್ದ ಕೊಟ್ಟೂರು ನಂತರ ಕ್ರಮೇಣ ಮೆಕ್ಕೆಜೋಳ ಬೆಳೆಯ ಕಣಜವೆಂದು ಖ್ಯಾತಿ ಪಡೆಯಿತು. ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ನಷ್ಟಕ್ಕೆ ಒಳಗಾದ ರೈತರು ಹೈಬ್ರೀಡ್ ಜೋಳಕ್ಕೆ ಮನಸೋತ ಪರಿಣಾಮ ಹಾಗೂ ಅಧಿಕ ಬೆಲೆಯಿಂದಾಗಿ ಅಧಿಕ ಪ್ರಮಾಣದಲ್ಲಿ ಹೈಬ್ರೀಡ್ ಜೋಳ ಬೆಳೆದಿದ್ದಾರೆ.

ಇಲ್ಲಿನ ಎಪಿಎಂಸಿ ಪಾರದರ್ಶಕ ವ್ಯವಹಾರ, ಸ್ಪರ್ಧಾತ್ಮಕ ಬೆಲೆ, ನಗದು ವಹಿವಾಟಿನಿಂದಾಗಿ ಕೊಟ್ಟೂರು ತಾಲೂಕು ಸೇರಿ ಜಗಳೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹರಪನಹಳ್ಳಿ ತಾಲೂಕಿನ 100ಕ್ಕೂ ಹೆಚ್ಚಿನ ಹಳ್ಳಿಗಳ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತಾರೆ. ಇದರಿಂದ ವಿಜಯನಗರ ಜಿಲ್ಲೆಯಲ್ಲಿ ಕೊಟ್ಟೂರು ಎಪಿಎಂಸಿ ಪ್ರಥಮ ಸ್ಥಾನದಲ್ಲಿ ನಿಲ್ಲಲ್ಲಿದೆ.

ಕಳೆದ ವರ್ಷ ಮೆಕ್ಕೆಜೋಳ ಬಿತ್ತಿ ಸಕಾಲಕ್ಕೆ ಮಳೆ ಬಾರದೆ ನಷ್ಟ ಅನುಭವಿಸಿದ್ದರು, ಮೇಲಾಗಿ ಮೆಕ್ಕೆಜೋಳಕ್ಕೆ ಹೆಚ್ಚು ನೀರುಬೇಕು. ಹೈಬ್ರೀಡ್ ಜೋಳಕ್ಕೆ ಕಮ್ಮಿ ನೀರಿದ್ದರೂ ಸಾಕು. ಮೆಕ್ಕೆಜೋಳ ಕ್ವಿಂಟಾಲ್‌ಗೆ 2500 ರೂ. ಒಳಗೆ ಬೆಲೆ ಇತ್ತು. ಆದರೆ ಕಳೆದ ವರ್ಷ ಹೈಬ್ರೀಡ್ ಜೋಳ ಒಂದು ಕ್ವಿಂಟಾಲ್‌ಗೆ 3500ರೂ. ಇತ್ತು. ಹೀಗಾಗಿ ರೈತರು ಹೆಚ್ಚು ಬೆಳೆದಿದ್ದಾರೆ. ಈ ಸೀಸನ್‌ನೊಳಗೆ ಒಂದು ಲಕ್ಷ ಕ್ವಿಂಟಾಲ್ ಮಾರಾಟವಾಗಲಿದೆ.ಮಹೇಂದ್ರಕುಮಾರ್ ಜೈನ್ವರ್ತಕ, ಕೊಟ್ಟೂರು ಎಪಿಎಂಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net