ಹಣದ ಜತೆ ಪತ್ನಿಯೂ ಇಲ್ಲ… ಪತಿಗೆ ಹೊಡೆದ 1.3 ಕೋಟಿ ಲಾಟರಿ ಹಣದೊಂದಿಗೆ ಪ್ರಿಯಕರನ ಜತೆ ಪತ್ನಿ ಪರಾರಿ!

Husband Lottery
Published on

ಬ್ಯಾಂಕಾಕ್: ಲಾಟರಿ ಹೊಡೆದ ಖುಷಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಮರು ಕ್ಷಣದಲ್ಲೇ ಆತನ ಪತ್ನಿ ಕೊಟ್ಟಿದ್ದು ಮಾತ್ರ ಎಂದೂ ಮರೆಯದಂತಹ ಶಾಕ್. ಏಕೆಂದರೆ, ಲಾಟರಿ ಹಣದ ಜತೆಗೆ ಪತ್ನಿಯು ಇಲ್ಲದಂತಾದ ದುರಾದೃಷ್ಟಕರ ಘಟನೆ ಈ ನತದೃಷ್ಟನ ಬಾಳಲ್ಲಿ ನಡೆದಿದೆ.

ವಿವರಣೆಗೆ ಬರುವುದಾದರೆ, ಥಾಯ್ಲೆಂಡ್​ ಮೂಲದ ಮನೀತ್​ ಎಂಬಾತನಿಗೆ 1.3 ಕೋಟಿ ರೂಪಾಯಿ ಲಾಟರಿ ಹೊಡೆದಿತ್ತು. ಇದೇ ಖುಷಿಯಲ್ಲಿ ಕುಣಿದು, ನಲಿದಾಡಿದ ಮನೀತ್​ ತನ್ನ ಪತ್ನಿಯ ಜೊತೆಗೆ ಈ ವಿಚಾರವನ್ನು ಹಂಚಿಕೊಂಡು ಇನ್ನಷ್ಟು ಸಂಭ್ರಮಿಸಿದ. ಆದರೆ, ಆತನಿಗೆ ಪತ್ನಿಯ ಒಳ ಮರ್ಮ ಮಾತ್ರ ತಿಳಿದಿರಲಿಲ್ಲ. ಹೇಗೆ ತಾನೇ ತಿಳಿಯಲು ಸಾಧ್ಯ. ಸುಖ-ದುಃಖದಲ್ಲಿ ಜೊತೆಯಾದ ಪತ್ನಿ ಈ ರೀತಿ ಮಾಡುತ್ತಾಳೆ ಅಂತಾ ಯಾರು ತಾನೇ ಊಹಿಸುತ್ತಾರೆ.

ಏನಾಯಿತು ಅಂದರೆ, ಬಂದ ಬಹುಮಾನದ ಹಣದಲ್ಲಿ ಒಂದಿಷ್ಟನ್ನು ದೇವಸ್ಥಾನಕ್ಕೆ ದೇಣಿಗೆ ನೀಡಿ, ಇನ್ನೊಂದಿಷ್ಟನ್ನು ಕುಟುಂಬದ ಸದಸ್ಯರಿಗೂ ಹಾಗೂ ಸಂಬಂಧಿಕರಿಗೆ ಹಂಚಲು ಮನೀತ್​ ಪ್ಲಾನ್​ ಮಾಡಿದ್ದ. ಹಣ ಹಂಚುವುದಕ್ಕೆ ಒಂದು ಕಾರ್ಯಕರ್ಮವನ್ನು ಏರ್ಪಡಿಸಿದ್ದ. ಕಾರ್ಯಕ್ರಮದ ವೇಳೆ ಒಬ್ಬ ಅಪರಿಚಿತ ವ್ಯಕ್ತಿ, ಮನೀತ್​ ಬಳಿ ಬಂದು ಆತನ ಪತ್ನಿ ಅಂಗಕನಾರಾತ್ ಬಗ್ಗೆ ಕೇಳಿದ್ದಾನೆ. ಆಕೆಯ ಸಂಬಂಧಿಕರಲ್ಲಿ ಒಬ್ಬನು ಎಂದು ಹೇಳಿದ್ದಾನೆ.

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಆ ಅಪರಿಚಿತ ವ್ಯಕ್ತಿಯ ಜೊತೆ ಪತ್ನಿ ಹಣದ ಸಮೇತ ಓಡಿ ಹೋಗಿದ್ದಾಳೆ. ಮನೀತ್​ ಮತ್ತು ಅಂಗಕನಾರಾತ್ 26 ವರ್ಷದ ಹಿಂದೆ ಮದುವೆ ಆಗಿದ್ದರು. ದಂಪತಿಗೆ ಮೂವರು ಮಕ್ಕಳು ಸಹ ಇದ್ದರು. ಆದರೆ, ಇಬ್ಬರದ್ದು ಅಧಿಕೃತ ಮದುವೆ ಎಂದು ಸಾಬೀತುಪಡಿಸುವ ಯಾವುದೇ ಸಾಕ್ಷಿ ಇಲ್ಲದ ಕಾರಣ ಹಣ ಹಿಂಪಡೆಯುವುದು ಕಷ್ಟಕರವಾಗಿದೆ. ಸದ್ಯ ದೂರು ದಾಖಲಾಗಿದ್ದು, ಅಂಗಕನಾರತ್ ಸಿಕ್ಕ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net