ಪತ್ನಿಯ ಕೊಂದ ಪತಿಗೆ ಜೀವಾವಧಿ ಶಿಕ್ಷೆ

court hammer 1
Published on

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 71ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ಆಂಧ್ರಪ್ರದೇಶ ಮೂಲದ ನಾಗೇಶ ಶಿಕ್ಷೆಗೆ ಗುರಿಯಾದ ಪತಿ. 2020ರ ಆಗಸ್ಟ್ 3ರಂದು ಪತ್ನಿ ಸಂಧ್ಯಾ ಎಂಬಾಕೆಯನ್ನು ಕೊಲೆ ಮಾಡಿದ್ದ. ಮಾರತ್‌ಹಳ್ಳಿ ಪೊಲೀಸರು ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯಾವತಿ, ವಾದ ಮಂಡಿಸಿದ್ದರು. ವಾದ-ಪ್ರತಿವಾದ ನಡೆಸಿದ ನ್ಯಾಯಾಧೀಶರಾದ ಎನ್ ಬಾಲಚಂದ್ರ ಭಟ್, ಅಪರಾಧಿ ನಾಗೇಶ್‌ಗೆ ಜೀವಾವಧಿ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ.

2015ರ ಮೇ 7ರಂದು ಸಂಧ್ಯಾಳನ್ನು ಮದುವೆಯಾದ ನಾಗೇಶ್, ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಮಾರತ್‌ಹಳ್ಳಿಯ ಸಪ್ತಗಿತಿ ಲೇಔಟ್‌ನಲ್ಲಿ ವಾಸವಾಗಿದ್ದರು. ನಾಗೇಶ್, ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದರೇ ಈಕೆ ಗೃಹಿಣಿಯಾಗಿದ್ದಳು.

ಈ ನಡುವೆ ದೂರದ ಸಂಬಂಧಿ ಯುವತಿ ಜತೆಗೆ ನಾಗೇಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದನ್ನು ನಾಗೇಶ್ ಬಳಿ ಪ್ರಶ್ನಿಸಿ ಆಕೆಯಿಂದ ದೂರ ಇರುವಂತೆ ಒತ್ತಾಯಿಸಿದ್ದಳು. ಕುಪಿತಗೊಂಡ ನಾಗೇಶ್, ಪತ್ನಿಯನ್ನೇ ಕೊಲೆಗೆ ಸ್ಕೆಚ್ ಹಾಕಿದ್ದ. 2020ರ ಆಗಸ್ಟ್ 8ರಂದು ತಾಯಿಯನ್ನು ಊರಿಗೆ ಬಿಟ್ಟು ಬರುವುದಾಗಿ ಪತ್ನಿ ಮತ್ತು ಸಂಬಂಧಿಕರಿಗೆ ಹೇಳಿ ಹೊರಟ ನಾಗೇಶ್, ಮುಳಬಾಗಿಲು ಬಳಿ ತುರ್ತು ಕೆಲಸ ಇರುವುದಾಗಿ ತಾಯಿಗೆ ಹೇಳಿ ಬಸ್‌ನಿಂದ ಇಳಿದುಕೊಂಡಿದ್ದ.

ವಾಪಸ್ ಮನೆಗೆ ರಾತ್ರಿ 11 ಗಂಟೆಗೆ ಬಂದು ಮಕ್ಕಳೊಂದಿಗೆ ಮಲಗಿದ್ದ ಪತ್ನಿಯ ತಲೆಯ ಮೇಲೆ ಸೀಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದ. ಬಳಿಕ ಅಪರಿಚಿತರು ಬಂದು ಪತ್ನಿಯೊಂದಿಗೆ ಅನೈತಿಕ ಸಂಬಂಧಿ ಹೊಂದಿ ಮದ್ಯ ಸೇವಿಸಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ನಾಗೇಶ್ ನೇ ಕೃತ್ಯ ಎಸಗಿರುವುದು ಗೊತ್ತಾಗಿ ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net