

ಹಾಸನ: ಇಲ್ಲೊಬ್ಬ ಕಿರಾತಕ ರಸ್ತೆಯಲ್ಲೇ ತನ್ನ ಪತ್ನಿಯ ಕತ್ತುಸೀಳಿ ಬರ್ಬರವಾಗಿ ಕೊಂದು ಹಾಕಿದ್ದಾನೆ.
ಹೊಳೆನರಸೀಪುರದ ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆಯಲ್ಲಿ ಶನಿವಾರ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಶಾಲಿನಿ ಕೊಲೆಯಾದ ದುರ್ದೈವಿ. ಪತಿ ಪುನೀತ್ ಕೊಲೆ ಆರೋಪಿ. ಈ ದಂಪತಿಗೆ ಒಂದು ವರ್ಷದ ಗಂಡು ಮಗು ಕೂಡ ಇದೆ.
ಹೊಳಬಿಲ್ಲೆನಹಳ್ಳಿಯ ಶಾಲಿನಿಯನ್ನು ಎರಡು ವರ್ಷದ ಹಿಂದೆ ಕವಿನಕೋಟೆ ಗ್ರಾಮದ ನಿವಾಸಿ ಪುನೀತ್ ಎಂಬಾತನ ಜತೆ ಅವರ ತಂದೆ ಮದುವೆ ಮಾಡಿದ್ದರು. ಮದುವೆಯಾಗಿ ಎರಡು ವರ್ಷವಾಗಿತ್ತು. ಶನಿವಾರ ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆ ಮಧ್ಯೆ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ಪುನೀತ್ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಕತ್ತಿಗೆಯನ್ನೇ ಸೀಳಿದ್ದಾನೆ. ಈ ವೇಳೆ ಶಾಲಿನಿಯ ರಕ್ಷಣೆಗೆ ಬಂದ ಗ್ರಾಮಸ್ಥರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿದ್ದ. ತೀವ್ರ ರಕ್ತಸ್ರಾವವಾಗಿ ಶಾಲಿನಿ ಸ್ಥಳದಲ್ಲೇ ಕೊನೆಯುಸಿರೆಳೆದಳು.
ಆರೋಪಿ ಪುನೀತ್ ತಪ್ಪಿಸಿಕೊಳ್ಳದಂತೆ ಹಿಡಿದು ಕೂಡಿ ಹಾಕಿದ್ದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.