

ಚಾಮರಾಜನಗರ: ಒಬ್ಬರನ್ನು ಕೊಲೆ ಮಾಡುವುದೇ ದೊಡ್ಡ ವಿಕೃತಿ. ಇನ್ನು ಕೊಲೆ ಮಾಡಿದ ಬಳಿಕ ವಿಕ್ಷಿಪ್ತವಾಗಿ ನಡೆದುಕೊಳ್ಳುವುದು, ಶವವನ್ನೂ ನೋಡಿ ಸಂಭ್ರಮಿಸುವುದು ಅದಕ್ಕಿಂತ ದೊಡ್ಡ ವಿಕೃತಿ. ಅಂಥದ್ದೊಂದು ವಿಕೃತ ಮನೋಭಾವವನ್ನು ಇಲ್ಲೊಬ್ಬ ಪತ್ನಿಯನ್ನು ಕೊಂದು ತೋರಿದ್ದಾನೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿ ಧರ್ಮಪುರಿ ಜಿಲ್ಲೆ ಎರಭಯ್ಯನಹಳ್ಳಿಯ ಮುನಿರಾಜು ಕೊಲೆ ಆರೋಪಿ. ಈತನ ಪತ್ನಿ ಲಕ್ಷ್ಮಿ ಕೊಲೆಯಾದ ಮಹಿಳೆ.
ಈತ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಬಳಿಕ ಅವಳ ರಕ್ತಸಿಕ್ತ ಶವದ ಫೋಟೋವನ್ನು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ. ನಂತರ ಈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲಕ್ಷ್ಮಿ ಪತಿಯನ್ನು ತೊರೆದು ಬಂದು ಪರಪುರುಷನೊಂದಿಗೆ ನಾಗಮಲೆಯಲ್ಲಿ ವಾಸವಾಗಿದ್ದಳು. ಇದರಿಂದ ಬೇಸತ್ತಿದ್ದ ಮುನಿರಾಜ್ ನಾಗಮಲೆಗೇ ಬಂದು ಈ ಕೃತ್ಯವೆಸಗಿದ್ದಾನೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.