ಪತ್ನಿಯನ್ನು ತಾನೇ ಕೆರೆಗೆ ತಳ್ಳಿ, 'ಹೆಂಡ್ತಿ ನಾಪತ್ತೆ ಆಗಿದ್ದಾಳೆ' ಎಂದು ನಾಟಕ ಆಡಿದ್ದ ಪತಿ ಬಂಧನ

crime
Published on

ತುಮಕೂರು: ಪತ್ನಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಲ್ಲದೆ, ಹೆಂಡತಿ ನಾಪತ್ತೆ ಆಗಿದ್ದಾಳೆ ಎಂದು ನಾಟಕವಾಡಿದ್ದ ಪತಿ ಕೊನೆಗೂ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಬೆಂಗಳೂರಿನ ಯಲಹಂಕ ಮೂಲದ ವಿನಯ್ ಬಂಧಿತ ಆರೋಪಿ. ಪತ್ನಿ ದರ್ಶಿನಿ (26) ಕೊಲೆಗೀಡಾದ ಮಹಿಳೆ. ವಿನಯ್​ಗೂ ನಾಗಮಂಗಲ ಮೂಲದ ದರ್ಶಿನಿ ಕಳೆದ ಆರು ವರ್ಷಗಳ ಹಿಂದೆ ಮದುವೆಯಾಗಿತ್ತು. ಇಬ್ಬರಿಗೆ ಐದು ವರ್ಷದ ಪುತ್ರನಿದ್ದಾನೆ. ಆದರೆ ಮದುವೆ ಆದಾಗಿನಿಂದಲೂ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ತಂದೆ ಮನೆಯಿಂದ ಹಣ ತರುವಂತೆ ಕಿರುಕುಳ ಕೊಡುತ್ತಿದ್ದ ವಿನಯ್, ಒಂದು ತಿಂಗಳ ಹಿಂದೆ ಬೆಂಗಳೂರು ಬಿಟ್ಟು‌, ಪತ್ನಿ ಜತೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕಳೆದ ಶನಿವಾರ ಬಟ್ಟೆ ಒಗೆಯಲು ಪತ್ನಿ ಕೆರೆಗೆ ತೆರಳಿದ್ದಾಗ ಆಕೆಯನ್ನು ನೀರಿಗೆ ತಳ್ಳಿದ್ದ ಪತಿ, ಹೆಂಡತಿ ನಾಪತ್ತೆ ಆಗಿದ್ದಾಳೆ ಎಂದು ನಾಟಕವಾಡಿದ್ದ.

ಕೆರೆಗೆ ತಳ್ಳಿ ಕೊಲೆ ಮಾಡಿ, ತನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಡ್ರಾಮಾ ಮಾಡಿದ್ದ. ಮಾತ್ರವಲ್ಲ ತನ್ನ ಮಾವ, ಅತ್ತೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಪತ್ನಿ ನಾಪತ್ತೆ ಆಗಿದ್ದಾಳೆ ಎಂದು ಹೇಳಿದ್ದ ವಿನಯ್, ತುರುವೇಕೆರೆ ಪೊಲೀಸ್ ಠಾಣೆಗೆ ಮಾವ ಹಾಗೂ ಸಂಬಂಧಿಕರ ಜೊತೆ ದೂರು ಕೊಡಲು ಕೂಡ ತೆರಳಿದ್ದ. ಆದರೆ ತನ್ನ ಪತ್ನಿಯ ಪೋಟೋ ತರುವುದಾಗಿ ಠಾಣೆಯಿಂದ ಹೊರಬಂದವನು ಪರಾರಿಯಾಗಿದ್ದ.

ಬಳಿಕ ಕೆರೆಯಲ್ಲಿ ಮೃತದೇಹ ಕಾಣಿಸಿದ ಬಗ್ಗೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅದು ದರ್ಶಿನಿ ಶವ ಎಂಬುದು ಖಚಿತವಾದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದ ಆರೋಪಿ ವಿನಯ್​ನನ್ನು ತುರುವೇಕೆರೆ ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net