ಕಂಟೈನರ್ ಡಿಕ್ಕಿಯಾಗಿ ಪತಿ ಸಾವು, ಪತ್ನಿಗೆ ಗಾಯ

Published on

ನಂಜನಗೂಡು: ನಗರದ ಹೊರವಲಯದಲ್ಲಿರುವ ಮಲ್ಲನಮೂಲೆ ಮಠದ ಬಳಿ ಸೋಮವಾರ ಬೈಕ್‌ಗೆ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಪತಿ ಸ್ಥಳದಲ್ಲೇ ಸಾವಿಗೀಡಾಗಿ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಚಾಮಲಾಪುರಹುಂಡಿ ಬಡಾವಣೆಯ ಶಂಕರ್(61) ಮೃತರು. ಇವರ ಪತ್ನಿ ನಾಗವೇಣಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲ್ಲನಮೂಲೆ ಗುರುಕಂಬಳೀಶ್ವರ ಮಠದಲ್ಲಿ ಸೋಮವಾರ ಜರುಗುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆ ವಿಭಜಕದಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದಾಗ ತಮಿಳುನಾಡು ಕಡೆಯಿಂದ ಬರುತ್ತಿದ್ದ ಕಂಟೈನರ್ ಡಿಕ್ಕಿ ಹೊಡೆದಿದೆ. ಈ ವೇಳೆ ಶಂಕರ್ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಂಚಾರ ಠಾಣೆ ಪಿಎಸ್‌ಐ ಜಯಕುಮಾರ್ ಭೇಟಿ ನೀಡಿ ಮಹಜರು ನಡೆಸಿದರು. ಅಪಘಾತಕ್ಕೆ ಕಾರಣವಾದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net