ಪ್ರತ್ಯೇಕವಾಗಿ ಇರಲು ಬಯಸಿದ ಪತ್ನಿಯ ಕೊಂದ ಪತಿ

crime
Published on

ಬೆಂಗಳೂರು: ಪ್ರತ್ಯೇಕವಾಗಿ ಇರಲು ಬಯಸಿದ ಪತ್ನಿ ಮೇಲೆ ಕೋಪಗೊಂಡ ಪತಿ, ಜಗಳ ತೆಗೆದು ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ.

ಕುಮಾರಸ್ವಾಮಿ ಲೇಔಟ್ ಬಳಿಯ ಇಲಿಯಾಸ್‌ನಗರದ ಶಿಯಾಫತ್ ಉನ್ನೀಸಾ (38) ಮೃತ ದುರ್ದೈವಿ. ಸೋಮವಾರ ಸಂಜೆ 7.15ರಲ್ಲಿ ಈ ಘಟನೆ ನಡೆದಿದ್ದು, ಆರೋಪಿ ನೂರುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೂರುಲ್ಲಾ ಮತ್ತು ಶಿಯಾಫತ್ ದಂಪತಿ ನಡುವೆ ಕ್ಷುಲ್ಲಕ ಕಾರಣಗಳಿಗೆ ಜಗಳವಾಗುತ್ತಿತ್ತು. ಪತಿಯಿಂದ ಪ್ರತ್ಯೇಕವಾಗಲು ಶಿಯಾಫತ್ ನಿರ್ಧರಿಸಿದ್ದರು. ಕೌಟುಂಬಿಕ ಕಲಹದಿಂದ ನೂರುಲ್ಲಾ ಕಳೆದ 5 ದಿನಗಳಿಂದ ಮನೆಗೆ ಬಂದಿರಲಿಲ್ಲ. ಸೋಮವಾರ ಸಂಜೆ ಶಿಯಾಫತ್ ಉನ್ನೀಸಾ ಮನೆ ಖಾಲಿ ಮಾಡಲು ಮುಂದಾಗಿದ್ದರು.

ಈ ವಿಚಾರ ತಿಳಿದು ಮನೆ ಬಳಿ ಬಂದು ಪತ್ನಿ ಶಿಯಾಫತ್ ಜತೆಗೆ ನೂರುಲ್ಲಾ ಜಗಳ ತೆಗೆದು ಗಲಾಟೆ ಮಾಡಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ನೂರುಲ್ಲಾ, ಚಾಕು ತೆಗೆದು ಪತ್ನಿಯ ಕುತ್ತಿಗೆ ಕೊಯ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಯಾಫತ್ ತೀವ್ರ ರಕ್ತಸ್ರಾವಾಗಿ ಮೃತಪಟ್ಟಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿ ನೂರುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net