ಗೃಹಪ್ರವೇಶಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ನದಿಗೆ ಹಾರಿದ್ಳು ಪತ್ನಿ, ನೇಣು ಬಿಗಿದುಕೊಂಡ ಪತಿ

Suicide
Published on

ಕೆ.ಆರ್​.ಪೇಟೆ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ತಾಲೂಕಿನ ಹಡವನಹಳ್ಳಿಯಲ್ಲಿ ಆ.10 ರಂದು ನೂತನ ಮನೆಯ ಗೃಹಪ್ರವೇಶದ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೀಗ ಆ ಮನೆಯ ಒಡೆಯ-ಒಡತಿ ಇಬ್ಬರೂ ಸಾವಿನ ಕದ ತಟ್ಟಿದ್ದು, ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಅಪ್ಪ-ಅಮ್ಮನ ಸಾವಿನಿಂದ ಮೂವರು ಮಕ್ಕಳೀಗ ಅನಾಥರಾಗಿದ್ದಾರೆ.

ಸಂತೇಬಾಚಹಳ್ಳಿ ಹೋಬಳಿಯ ಹಡವನಹಳ್ಳಿ ಗ್ರಾಮದ ಲೋಕೇಶ್​(43) ಮತ್ತು ಸವಿತಾ(36) ದಂಪತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಿತಾ ಶುಕ್ರವಾರ ಬೆಳಗ್ಗೆ ಗ್ರಾಮ ಹೊರವಲಯದ ಕೆರೆ ದಡೆಯಲ್ಲಿ ಸ್ವೆಟರ್​, ಮೊಬೈಲ್​ ಇಟ್ಟು ನೀರಿಗೆ ಹಾರಿದ್ದಾಳೆ. ಕೆರೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಅಲ್ಲಿದ್ದ ಮೊಬೈಲ್​ನಿಂದ ಆಕೆಯ ಪತಿಗೆ ಕರೆ ಮಾಡಿ ವಿಷಯ ತಿಳಿಸುತ್ತಿದ್ದಂತೆ ಆತನೂ ತೋಟದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಸವಿತಾಳ ಸಾವಿನ ಸುದ್ದಿ ತಿಳಿದರೂ ಪತಿ ಲೋಕೇಶ್​ ಸ್ಥಳಕ್ಕೆ ಸುಮಾರು ಸಮಯವಾದರೂ ಬರಲಿಲ್ಲ. ಹಾಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ತೋಟದ ಮನೆಯಲ್ಲಿ ಆತ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಸ್ಥಳಕ್ಕೆ ಪಟ್ಟಣ ಠಾಣೆ ಎಸ್​ಐ ಬ್ಯಾಟರಾಯಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು. ದಂಪತಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.

ಗ್ರಾಮದಲ್ಲಿ ದಂಪತಿ ಮನೆ ನಿರ್ಮಿಸಿದ್ದರು. ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ಆ.10ಕ್ಕೆ ನಿಗದಿ ಮಾಡಿಕೊಂಡಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಸಾವಿಗೆ ಹೆದರಿದ ಪತಿಯೂ ನೇಣಿಗೆ ಕೊರಳೊಡ್ಡಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net