ಕಾಂಗ್ರೆಸ್​ ಟಿಕೆಟ್​​ಗಾಗಿ ಧಾವಂತ, ಹಲವರಿಂದ ಅರ್ಜಿ ಸಲ್ಲಿಕೆ; ಕೆಲವು ಸ್ವಾರಸ್ಯಗಳ ಬೆನ್ನಿಗೆ ಅನಿರೀಕ್ಷಿತ ಬೆಳವಣಿಗೆ!

congress
Published on

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಟಿಕೆಟ್​​ಗಾಗಿ ಆಕಾಂಕ್ಷಿಗಳು ಇಂದು ಧಾವಿಸಿದ್ದು, ಹಲವಾರು ಅರ್ಜಿಗಳು ಸಲ್ಲಿಕೆಯಾದವು. ಟಿಕೆಟ್​ಗಾಗಿ ಅರ್ಜಿ ಸಲ್ಲಿಕೆ ಸಂಬಂಧ ಹಲವು ಸ್ವಾರಸ್ಯಗಳು ಕಂಡುಬಂದಿದ್ದು, ಕೊನೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ.

ಈಶ್ವರಪ್ಪ ವಿರುದ್ಧ ತೊಡೆತಟ್ಟಲು 17 ಆಕಾಂಕ್ಷಿಗಳು

ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾದ್ದರಿಂದ ಆಕಾಂಕ್ಷಿಗಳು ಇಂದು ಕಾಂಗ್ರೆಸ್​ ಕಚೇರಿಗೆ ಧಾವಿಸಿ, ಮುಗಿಬಿದ್ದು ಅರ್ಜಿ ಸಲ್ಲಿಸಿದರು. ಈ ಪೈಕಿ ಶಿವಮೊಗ್ಗ ನಗರದಲ್ಲಿ ಅತಿಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಬಿಜೆಪಿಯಿಂದ ಈಶ್ವರಪ್ಪ ಸ್ಪರ್ಧಿಸುವ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂ 17 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಸಾಮಾನ್ಯ ಕ್ಷೇತ್ರವಾಗಿರುವ ಬಳ್ಳಾರಿ ಹಾಗೂ ಹರಪನಹಳ್ಳಿಗೆ 13 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಸಾಗರ ಕ್ಷೇತ್ರಕ್ಕೆ ಒಂದೇ ಕುಟುಂಬದ ಮೂವರಿಂದ ಅರ್ಜಿ

ಸಾಗರ ಕ್ಷೇತ್ರಕ್ಕೆ ಒಂದೇ ಕುಟುಂಬದ ಮೂವರಿಂದ ಅರ್ಜಿ ಸಲ್ಲಿಕೆಯಾಗಿದೆ. ಕಾಗೋಡು ತಿಮ್ಮಪ್ಪ, ಕಾಗೋಡು ಪುತ್ರಿ ಡಾ.ರಾಜನಂದಿನಿ, ಅಳಿಯ ಬೇಳೂರು ಗೋಪಾಲಕೃಷ್ಣ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಬಿ.ಆರ್. ಜಯಂತ್, ರತ್ನಾಕರ್ ಹೊನಗೋಡು ಎಂಬವರೂ ಆಸಕ್ತಿ ತೋರಿದ್ದು, ಒಟ್ಟು ಐದು ಅರ್ಜಿ ಸಲ್ಲಿಕೆಯಾಗಿದೆ.

ಐದೂ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ ಆಕಾಂಕ್ಷಿ

ಸಾಗರದಲ್ಲಿ ಒಂದೇ ಕ್ಷೇತ್ರಕ್ಕೆ ಒಂದೇ ಕುಟುಂಬದ ಮೂವರು ಅರ್ಜಿ ಸಲ್ಲಿಸಿದ್ದರೆ ಇನ್ನೊಂದು ಕಡೆ ಒಬ್ಬರೇ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಸಕ್ತಿ ತೋರಿದ್ದು, ಐದೂ ಕಡೆಗೆ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಚಿಕ್ಕಮಗಳೂರು, ಶೃಂಗೇರಿ, ತೀರ್ಥಹಳ್ಳಿ, ಪಾಂಡವಪುರ, ದೇವರಹಿಪ್ಪರಗಿ ಕ್ಷೇತ್ರಗಳ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಟಿಕೆಟ್​​ಗಾಗಿ ಹಾಲಿ-ಮಾಜಿಗಳ ಪೈಪೋಟಿ

ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರಕ್ಕೆ ಹಾಲಿ- ಮಾಜಿ ಶಾಸಕರ ಮಧ್ಯೆಯೇ ಪೈಪೋಟಿ ಕಂಡುಬಂದಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ಬೆಳಗ್ಗೆ ಅರ್ಜಿ ಸಲ್ಲಿಸಿದ್ದರೆ, ಮಾಜಿ ಶಾಸಕ ಪ್ರಸನ್ನಕುಮಾರ್ ಇದೇ ಕ್ಷೇತ್ರದ ಟಿಕೆಟ್​ಗಾಗಿ ನಿನ್ನೆಯೇ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ ಪ್ರಸನ್ನಕುಮಾರ್ ಅವರು ಡಿ.ಕೆ.ಶಿವಕುಮಾರ್ ಬಣದಲ್ಲಿ ಮತ್ತು ಅಖಂಡ ಶ್ರೀನಿವಾಸಮೂರ್ತಿಯವರು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ಪೈಪೋಟಿ ಕುತೂಹಲ ಕೆರಳಿಸಿದೆ.

ಡಿಕೆಸಿ ಪರವಾಗಿ ಬೆಂಬಲಿಗರಿಂದ ಅರ್ಜಿ ಸಲ್ಲಿಕೆ
ಕನಕಪುರ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರವಾಗಿ ಎಂಎಲ್​ಸಿ ರವಿ, ಕೆಪಿಸಿಸಿ ಖಜಾಂಚಿಗಳಾದ ವಿನಯ್ ಕಾತಿ೯ಕ್, ಕನಕಪುರ ಬ್ಲಾಕ್ ಅಧ್ಯಕ್ಷರಾದ ವಿಜಯ್ ದೇವ್, ಮುೂತಿ೯, ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಕೆಂಪರಾಜು, ಕೆಪಿಸಿಸಿ ಮಾದ್ಯಮ ವಿಭಾಗದ ಸಂಯೋಜಕ ಜಿ.ಸಿ.ರಾಜು ಮುಂತಾದವರು ಜತೆಯಾಗಿ ತೆರಳಿ ಅರ್ಜಿ ಸಲ್ಲಿಸಿದರು.

ಟಿಕೆಟ್​ಗಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕೆಪಿಸಿಸಿ ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾದ್ದರಿಂದ ಹಲವರು ಅರ್ಜಿ ಸಲಿಸಲು ಧಾವಿಸಿದ್ದರು. ಅದಾಗ್ಯೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಕೊನೆಯ ಹಂತದಲ್ಲಿ ವಿಸ್ತರಣೆ ಮಾಡಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಗಡುವನ್ನು ನ.21 ರವರೆಗೆ ವಿಸ್ತರಿಸಲಾಗಿದೆ.

ಈ ಮೊದಲು ಅರ್ಜಿ ಸಲ್ಲಿಕೆಗೆ ನ.15 ಕೊನೇ ದಿನವಾಗಿತ್ತು. ಆದರೆ ಈ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯದ ಮೂಲೆಮೂಲೆಗಳಿಂದ ಪಕ್ಷದವರು ಹಾಗೂ ಅನ್ಯಪಕ್ಷಗಳಿಂದ ಕಾಂಗ್ರೆಸ್​​ಗೆ ಬರಲು ಇಚ್ಛಿಸಿರುವವರು ಒತ್ತಡ ಹೇರಿದ್ದರಿಂದ ಅವಧಿ ವಿಸ್ತರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net