

ಕಿಂಗ್ಸ್ಟನ್: ಅಟ್ಲಾಂಟಿಕ್ ನ ಪ್ರಬಲ ಚಂಡಮಾರುತಗಳಲ್ಲಿ ಒಂದಾದ ಮೆಲಿಸ್ಸಾ, ಜಮೈಕಾವನ್ನು ಸಂಪೂರ್ಣವಾಗಿ ನಲುಗಿಸಿದ್ದು, ಸದ್ಯ ಉತ್ತರ-ಈಶಾನ್ಯಕ್ಕೆ ಕ್ಯೂಬಾದ ಕಡೆಗೆ ಸಾಗುತ್ತಿದೆ. ಜಮೈಕಾವನ್ನು ಅಪ್ಪಳಿಸಿರುವ ಈ ವಿನಾಶಕಾರಿ ಚಂಡಮಾರುತವು ಗಂಟೆಗೆ 295 ಕಿಮೀ (185 ಮೈಲುಗಳಷ್ಟು) ವೇಗದ ಗಾಳಿ, ಭಾರಿ ಪ್ರವಾಹ (Flood) ಮತ್ತು ಭೂಕುಸಿತಗಳನ್ನು ಉಂಟುಮಾಡಿದೆ ಎಂದು ವರದಿಯಾಗಿದೆ.
ಇದರಿಂದಾಗಿ ಮೂಲಸೌಕರ್ಯಕ್ಕೆ ತುಂಬಾ ಹಾನಿಯನ್ನುಂಟಾಗಿದ್ದು, ಅನೇಕ ಜನರು ಸ್ಥಳಾಂತರಗೊಂಡಿದ್ದಾರೆ. ಆಸ್ಪತ್ರೆಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ. ಚೇತರಿಕೆ ಪ್ರಕ್ರಿಯೆಯು ನಿಧಾನವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಜಮೈಕಾದ ನೈಋತ್ಯ ಕರಾವಳಿಯಲ್ಲಿ ನ್ಯೂ ಹೋಪ್ ಬಳಿಯ ಭೀಕರ ಚಂಡಮಾರುತವಾಗಿ ಅಪ್ಪಳಿದ್ದು, ಈ ವೇಳೆ ವೇಗವಾಗಿ ಗಾಳಿ ಬೀಸಿ ಮರಗಳನ್ನು ಉರುಳಿಸಿತ್ತು. ಹಾಗೆಯೇ ಮನೆಯ ಛಾವಣಿಗಳನ್ನು ಹಾನಿಗೊಳಿಸಿ, ವಿಶಾಲವಾದ ಭೂಮಿಯನ್ನು ಪ್ರವಾಹದಲ್ಲಿ ಮುಳುಗಿಸಿತ್ತು.
ಸೇಂಟ್ ಎಲಿಜಬೆತ್ ಪ್ಯಾರಿಷ್ ನೀರಿನಲ್ಲಿ ಮುಳುಗಿತ್ತು. ಈ ಪ್ರದೇಶಗಳಲ್ಲಿ ಹಲವಾರು ಆಸ್ಪತ್ರೆಗಳು ಹಾನಿಯಾದವು. ಅರ್ಧಮಿಲಿಯನ್ಗಿಂತಲೂ ಹೆಚ್ಚು ಜನರು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರು ಎಂದು ಸುದ್ಧಿ ಸಂಸ್ಥೆಗಳು ವರದಿ ಮಾಡಿವೆ.
ತಡರಾತ್ರಿ ಹೊತ್ತಿಗೆ, ಮೆಲಿಸ್ಸಾ ಚಂಡಮಾರುತವು ಜಮೈಕಾದ ಪರ್ವತಗಳನ್ನು ದಾಟಿ ಈಶಾನ್ಯಕ್ಕೆ ಚಲಿಸಿದ್ದರಿಂದ ಭೂಕುಸಿತಗಳಿಗೆ ಕಾರಣವಾಗಿದೆ. ಈ ಕಾರಣದಿಂದ ಹಲವಾರು ಸಮುದಾಯಗಳಿಗೆ ಪ್ರವೇಶವನ್ನು ಕಡಿತಗೊಳಿಸಲಾಗಿದೆ ಎಂದು US ರಾಷ್ಟ್ರೀಯ ಹರಿಕೇನ್ ಸೆಂಟರ್ (NHC) ವರದಿ ಮಾಡಿದೆ.
ಈ ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಪ್ರಬಲ ಚಂಡಮಾರುತದಿಂದ ಮನೆಯ ಛಾವಣಿಗಳು ಹಾರಿಹೋಗಿವೆ. ಪರಿಸ್ಥಿತಿ ಸುಧಾರಿಸಿ ಆ ವ್ಯಕ್ತಿಗಳನ್ನು ತಲುಪಲು ಸ್ವಲ್ಪ ಪ್ರಯತ್ನ ಮಾಡಬಹುದೆಂದು ಆಶಿಸುತ್ತೇವೆ ಎಂದು ಉಪ ವಿಪತ್ತು ಮಂಡಳಿಯ ಅಧ್ಯಕ್ಷ ಡೆಸ್ಮಂಡ್ ಮೆಕೆಂಜಿ ಹೇಳಿಕೆ ನೀಡಿದ್ದಾರೆ.
ವರದಿಗಳ ಪ್ರಕಾರ, ಈವರೆಗೂ 3 ಕುಟುಂಬಗಳು ಕಪ್ಪು ನದಿಯಲ್ಲಿ ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಸಿಬ್ಬಂದಿಗಳು ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಚಂಡಮಾರುತ ಬೀಸುವ ಸಮಯದಲ್ಲಿ ಕನಿಷ್ಟ 7 ಜನರು ಮೃತಪಟ್ಟಿದ್ದಾರೆ. ಜಮೈಕಾದಲ್ಲಿ ಮೂರು ಜನ, ಹೈಟಿಯಲ್ಲಿ ಮೂರು ಜನ ಹಾಗೂ ಡೊಮಿನಿಕನ್ ಗಣರಾಜ್ಯದಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮಂಗಳವಾರ ತಡರಾತ್ರಿಯ ವೇಳೆಗೆ ಸುಮಾರು 15,000 ಜನರು ತಾತ್ಕಾಲಿಕ ಆಶ್ರಯದಲ್ಲಿದ್ದಾರೆ. ಆ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಜನರನ್ನು ಸ್ಥಳಾಂತರಿಸುವ ಬಗ್ಗೆ ಅಲ್ಲಿನ ಸರ್ಕಾರ ಹೇಳಿಕೆ ನೀಡಿದೆ.
ಚಂಡಮಾರುತದಿಂದಾಗುವ ಹಾನಿಗೆ ಸರ್ಕಾರವು 33 ಮಿಲಿಯನ್ ಯುಎಸ್ ಡಾಲರ್ ತುರ್ತು ಬಜೆಟ್ ಅನ್ನು ಮೀಸಲಿಟ್ಟಿದೆ ಮತ್ತು ಕಳೆದ ವರ್ಷದ ಬೆರಿಲ್ ಚಂಡಮಾರುತದ ಹಾನಿಗೆ ವಿಮೆ ಮತ್ತು ಸಾಲ ನಿಬಂಧನೆಗಳನ್ನು ಸಕ್ರಿಯಗೊಳಿಸಿದೆ ಎಂದು ಜಮೈಕಾದ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಹೇಳಿಕೆ ನೀಡಿದ್ದಾರೆ.
ವಿಶ್ವ ಹವಾಮಾನ ಸಂಸ್ಥೆಯು ಮೆಲಿಸ್ಸಾವನ್ನು ಜಮೈಕಾವನ್ನು ಶತಮಾನದ ಚಂಡಮಾರುತ ಎಂದು ಬಣ್ಣಿಸಿದ್ದಾರೆ. ಇದು ಒಂದು ವಿಪತ್ತಿನ ಪರಿಸ್ಥಿತಿ ಎಂದು ತಿಳಿಸಿದೆ. (ಏಜೆನ್ಸೀಸ್)